ಕುಂಬಳೆ : ಕುಂಬಳೆ ಪೊಲೀಸ್ ಠಾಣೆ ವ್ಯಾಪ್ತಿಯ ಕುಬಣೂರು ನಿವಾಸಿ ಅಬ್ದುಲ್ ಖಾದರ್ ಅವರ ತೋಟದಿಂದ ತೆಂಗಿನಕಾಯಿ ಹಾಗೂ ಮನೆ ಕೋಳಿಗೂಡಿನಿಂದ ಕೋಳಿ ಕಳವಿಗೈದ ಆರೋಪಿ ಕುಬಣೂರು ಕೆದಕ್ಕಾರು ನಿವಾಸಿ ವಿಶ್ವನಾಥ ಕೆ. ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಅಬ್ದುಲ್ ಖಾದರ್ ಅವರ ದೂರಿನ ಮೇರಗೆ ಈತನನ್ನು ಬಂಧಿಸಲಾಗಿದೆ. ಅಬ್ದುಲ್‍ಖಾದರ್ ತೋಟದಿಂದ ಕಳೆದ ಒಂದು ತಿಂಗಳ ಕಾಲಾವಧಿಯಲ್ಲಿ ಹಲವು ಬಾರಿಯಾಗಿ 150ರಷ್ಟು ತೆಂಗಿನ ಕಾಯಿ ಕಳವಾಗಿತ್ತು. ಅಲ್ಲದೆ ನ. 26ರಂದು ರಾತ್ರಿ ಅಬ್ದುಲ್ ಖಾದರ್ ಅವರ ತರವಾಡು ಮನೆಯ ಸನಿಹದ ಗೂಡಿನಿಂದ ನಾಲ್ಕು ಕೋಳಿಗಳೂ ಕಳವಾಗಿತ್ತು. ಕಳವಾದ ಕೋಳಿಗಳನ್ನು ಉಪ್ಪಳದ ಕೋಳಿ ಅಂಗಡಿಯೊಂದಕ್ಕೆ ಮಾರಾಟಮಾಡಿರುವ ಬಗ್ಗೆ ಮಾಹಿತಿ ಲಭಿಸಿತ್ತು. ಕೋಳಿ ಅಂಗಡಿ ಸನಿಹದ ಸಿಸಿ ಕ್ಯಾಮರಾ ತಪಾಸಣೆ ನಡೆಸಿದಾಗ ವಿಶ್ವನಾಥನ ಬಗ್ಗೆ ಮಾಹಿತಿ ಲಭಿಸಿದ್ದು, ಈತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಕಳವು ಬೆಳಕಿಗೆ ಬಂದಿದೆ. ಕಳವಾದ ಕೋಳಿ ಮೌಲ್ಯ 3600ರೂ. ಹಾಗೂ ತೆಂಗಿನ ಕಾಯಿ ಮೌಲ್ಯ6750ರೂ. ಅಂದಾಜಿಸಲಾಗಿದೆ. ಆರೋಪಿ ಬಂಧನವಾಗುತ್ತಿದ್ದಂತೆ ಇನ್ನೂ ಹಲವು ಮಂದಿ ದೂರುಗಳೊಂದಿಗೆ ಠಾಣೆಗೆ ಆಗಮಿಸಿದ್ದಾರೆ.