ಡಮಾಸ್ಕಸ್: ಬಷರ್ ಅಸ್ಸಾದ್ ಅವರು ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿ, ಸಿರಿಯಾ ತೊರೆದಿದ್ದಾರೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಭಾನುವಾರ ತಿಳಿಸಿದೆ.
ಬಷರ್ ಆಡಳಿತದ ವಿರುದ್ಧ ರಾಷ್ಟ್ರದಾದ್ಯಂತ ಆಕ್ರಮಣ ನಡೆಸುತ್ತಿರುವ ಇಸ್ಲಾಂ ಬಂಡುಕೋರರು, ಎರಡು ವಾರಗಳಿಗೂ ಕಡಿಮೆ ಅವಧಿಯಲ್ಲಿ ರಾಜಧಾನಿ ಡಮಾಸ್ಕಸ್ ಅನ್ನು ವಶಕ್ಕೆ ಪಡೆದಿದ್ದಾರೆ.
ಇದರ ಬೆನ್ನಲ್ಲೇ, ಅಧ್ಯಕ್ಷರು ರಾಜೀನಾಮೆ ನೀಡಿ ದೇಶದಿಂದ ಪಲಾಯನ ಮಾಡಿದ್ದಾರೆ.
ಈ ಸಂಬಂಧ ಹೇಳಿಕೆ ಬಿಡುಗಡೆ ಮಾಡಿರುವ ರಷ್ಯಾ ಸಚಿವಾಲಯ, ಸಂಘರ್ಷ ನಡೆಸುತ್ತಿರುವ ಹಲವು ಸಶಸ್ತ್ರ ಪಡೆಗಳೊಂದಿಗೆ ಅಸ್ಸಾದ್ ಅವರು ಮಾತುಕತೆ ನಡೆಸಿದ್ದಾರೆ ಎಂದಷ್ಟೇ ತಿಳಿಸಿದ್ದು, ಖಚಿತವಾಗಿ ಎಲ್ಲಿಗೆ ಹೋಗಿದ್ದಾರೆ ಎಂಬುದೂ ಸೇರಿದಂತೆ ಹೆಚ್ಚಿನ ವಿವರ ಬಿಟ್ಟುಕೊಟ್ಟಿಲ್ಲ.
ಸಿರಿಯಾ ಅಧ್ಯಕ್ಷರ ಕಚೇರಿಯಿಂದ ಈ ಸಂಬಂಧ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.
1970ರ ದಶಕದಿಂದಲೂ ಅಸ್ಸಾದ್ ಕುಟುಂಬದ ಬಿಗಿ ಹಿಡಿತದಲ್ಲಿದ್ದ ಸಿರಿಯಾ ಪಾಲಿಗೆ ಇದು ಅತ್ಯಂತ ಆಘಾತಕಾರಿ ಸುದ್ದಿಯಾಗಿದೆ. ಅಸ್ಸಾದ್ ಅವರನ್ನು ಕೆಳಗಿಳಿಸಲು ದಶಕಕ್ಕೂ ಹೆಚ್ಚು ಸಮಯದಿಂದ ಬಂಡುಕೋರ ಸಂಘಟನೆಗಳು ನಡೆಸುತ್ತಿದ್ದ ಪ್ರಯತ್ನಕ್ಕೆ ಅನಿರೀಕ್ಷಿತ ಯಶಸ್ಸು ಸಿಕ್ಕಂತಾಗಿದೆ.
ತಮ್ಮ ಸ್ವಾತಂತ್ರ್ಯದ ಮೇಲೆ ಕಡಿವಾಣ ಹೇರಲು ದಬ್ಬಾಳಿಕೆ ತಂತ್ರಗಳನ್ನು ಬಳಸುತ್ತಿದ್ದ ಆಡಳಿತಕ್ಕೆ ಭಯ ಪಡಬೇಕಿಲ್ಲ ಎಂಬ ಕಾರಣದಿಂದಾಗಿ, ಅಸ್ಸಾದ್ ಆಡಳಿತದ ಪತನವು ಸಿರಿಯಾದ ಹಲವರ ಪಾಲಿಗೆ ಹೊಸ ಭರವಸೆಗಳನ್ನು ಮೂಡಿಸಿದೆ. ಆದರೆ, ಅದೇ ಹೊತ್ತಿನಲ್ಲಿ, ಸಿರಿಯಾದ ಆಡಳಿತ ಯಾರ ವಶವಾಗಲಿದೆ ಎಂಬ ಅನಿಶ್ಚಿತತೆ ಸೃಷ್ಟಿಯಾಗಿದೆ. ದೇಶದ ಚುಕ್ಕಾಣಿ ಹಿಡಿಯಲು ಹಲವು ಬಣಗಳು ಸ್ಪರ್ಧೆಗಿಳಿದಿರುವುದರಿಂದ, ಭಯದ ವಾತಾವರಣ ನಿರ್ಮಾಣವಾಗಿದೆ.