ದೀರ್ ಅಲ್-ಬಲಾಹ್: ಉತ್ತರ ಗಾಜಾದ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಸೇನೆಯು ಆಸ್ಪತ್ರೆಯೊಂದರ ನಿರ್ದೇಶಕರೊಬ್ಬರನ್ನು ವಶಕ್ಕೆ ಪಡೆದಿದೆ. ದಾಳಿಯಲ್ಲಿ ಮಕ್ಕಳು ಸೇರಿದಂತೆ 9 ಮಂದಿ ಮೃತಪಟ್ಟಿದ್ದಾರೆ.
ಕಮಲ್ ಅಡ್ವಾನ್ ಆಸ್ಪತ್ರೆಯ ನಿರ್ದೇಶಕ ಡಾ.ಹುಸ್ಸಮ್ ಅಬು ಸಫಿಯಾ ಅವರನ್ನು ಮತ್ತು ಇತರ ಸಿಬ್ಬಂದಿಯನ್ನು ಇಸ್ರೇಲ್ ಪಡೆ ಶುಕ್ರವಾರ ಬಂಧಿಸಿ ವಿಚಾರಣಾ ಕೇಂದ್ರದಲ್ಲಿ ಇಟ್ಟುಕೊಂಡಿದೆ ಎಂದು ಗಾಜಾದ ಆರೋಗ್ಯ ಇಲಾಖೆ ಹೇಳಿದೆ.
ಆಸ್ಪತ್ರೆಗೆ ನುಗ್ಗಿದ ಇಸ್ರೇಲ್ ಸೈನಿಕರು ಸಿಬ್ಬಂದಿ ಮತ್ತು ರೋಗಿಗಳು ಹೊರಹೋಗುವಂತೆ ಒತ್ತಾಯಿಸಿದ್ದಾರೆ ಎಂದು ತಿಳಿಸಿದೆ.
ಹುಸ್ಸಮ್ ಅಬು ಅವರನ್ನು ವಶಕ್ಕೆ ಪಡೆದಿರುವ ಬಗ್ಗೆ ಇಸ್ರೇಲ್ ಸೇನೆ ಪ್ರತಿಕ್ರಿಯೆ ನೀಡಿಲ್ಲ. ಆಸ್ಪತ್ರೆಯ ಒಳಗೆ ನುಗ್ಗಿ ದಾಳಿ ನಡೆಸಲಾಗಿಲ್ಲ, ಆದರೆ ಜನರು ಹೊರಗೆ ಹೋಗುವಂತೆ ಆದೇಶಿಸಲಾಗಿದೆ ಎಂದು ಇಸ್ರೇಲ್ ಸೇನೆ ಶುಕ್ರವಾರ ಹೇಳಿತ್ತು.
ಕಳೆದ 24 ಗಂಟೆಗಳಲ್ಲಿ 48 ಜನ ಇಸ್ರೇಲ್ ದಾಳಿಯಿಂದಾಗಿ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಇಲಾಖೆ ತಿಳಿಸಿದೆ.