ಜೆರುಸಲೇಂ: ಸಿರಿಯಾದ ಮೇಲೆ ಸೇನಾ ಕಾರ್ಯಾಚರಣೆ ಮುಂದುವರಿಸಿರುವ ಇಸ್ರೇಲ್, ಕ್ಷಿಪಣಿ ದಾಸ್ತಾನು ಕೇಂದ್ರ ಗುರಿಯಾಗಿಸಿ ವೈಮಾನಿಕ ದಾಳಿ ನಡೆಸಿದೆ.
ಬಶರ್ ಅಸಾದ್ ಆಡಳಿತದ ಅವಧಿಯಲ್ಲಿನ ಸೇನಾ ತಾಣಗಳು ಮತ್ತು ಕ್ಷಿಪಣಿ ದಾಸ್ತಾನು ಕೇಂದ್ರ ಗುರಿಯಾಗಿಸಿ ಸೋಮವಾರ ಬೆಳಿಗ್ಗೆ ದಾಳಿ ನಡೆದಿದೆ ಎಂದು ಬ್ರಿಟನ್ ಮೂಲದ ಸಿರಿಯಾ ಮಾನವ ಹಕ್ಕುಗಳ ವೀಕ್ಷಣಾಲಯವು ಹೇಳಿದೆ.
'ಕರಾವಳಿ ನಗರ ತರ್ತೋಸ್‌ನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಸಿದೆ. 2012ರ ಬಳಿಕ ಇಸ್ರೇಲ್ ನಡೆಸಿದ ಅತಿದೊಡ್ಡ ದಾಳಿ ಇದು' ಎಂದು ತಿಳಿಸಿದೆ. ಆದರೆ ದಾಳಿಯ ಬಗ್ಗೆ ಇಸ್ರೇಲ್ ಸೇನೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
ಬಶರ್ ಅಸಾದ್ ಅವರ ಆಡಳಿತ ಕೊನೆಗೊಂಡ ಬಳಿಕ ಇಸ್ರೇಲ್ ಸೇನೆ ಸಿರಿಯಾ ಮೇಲೆ ಹಲವು ವೈಮಾನಿಕ ದಾಳಿ ನಡೆಸಿದೆ. ತನ್ನ ಗಡಿಗೆ ಹೊಂದಿಕೊಂಡಿರುವ ಸಿರಿಯಾದ ಪ್ರದೇಶವನ್ನೂ (ಬಫರ್ ವಲಯ) ವಶಕ್ಕೆ ಪಡೆದುಕೊಂಡಿದೆ. 1974ರ ಕದನ ವಿರಾಮ ಒಪ್ಪಂದವನ್ನು ಇಸ್ರೇಲ್ ಉಲ್ಲಂಘಿಸಿದೆ ಎಂಬ ಆರೋಪ ಕೇಳಿಬಂದಿದೆ.
ಇಸ್ರೇಲ್ ಸೇನೆಯು ಬಫರ್ ವಲಯ ದಾಟಿ ಮುನ್ನುಗಿರುವುದು ಮತ್ತು ಗೋಲನ್ ಹೈಟ್ಸ್ ಪ್ರದೇಶದಲ್ಲಿ ಹೆಚ್ಚಿನ ಸೇನೆಯನ್ನು ನಿಯೋಜಿಸಿರುವುದಕ್ಕೆ ಸಿರಿಯಾದ ಮಧ್ಯಂತರ ಸರ್ಕಾರವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಈಗಾಗಲೇ ದೂರು ನೀಡಿದೆ.
ಅಮೆರಿಕ ಪ್ರಜೆಗಳಿಗೆ ಸೂಚನೆ: ಸಿರಿಯಾದಲ್ಲಿರುವ ಅಮೆರಿಕನ್ನರು ತಕ್ಷಣದಲ್ಲೇ ದೇಶವನ್ನು ತೊರೆಯುವಂತೆ ಡಮಾಸ್ಕಸ್‌ನಲ್ಲಿರುವ ಅಮೆರಿಕ ರಾಯಭಾರ ಕಚೇರಿ ಸೂಚಿಸಿದೆ.
'ತಕ್ಷಣದಲ್ಲೇ ಸಿರಿಯಾ ತೊರೆಯಲು ಆಗದವರು ಯಾವುದೇ ರೀತಿಯ ತುರ್ತು ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗಿರಬೇಕು' ಎಂದು 'ಎಕ್ಸ್'ನಲ್ಲಿ ಸಂದೇಶ ನೀಡಿದೆ.