ಮಂಡ್ಯ: 87ನೇ ನುಡಿ ಜಾತ್ರೆಯ ಸಮ್ಮೇಳನಾಧ್ಯಕ್ಷ ಗೊ.ರು.ಚನ್ನಬಸಪ್ಪ ಅವರು "ಅರಮನೆ ದರ್ಬಾರ್ ಸಿಂಹಾಸನ" ಒಳಗೊಂಡ ವಿಶೇಷ ರಥವನ್ನು ಏರಿದ್ದು, ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಿದೆ.
ನಿರ್ಮಲಾನಂದನಾಥ ಸ್ವಾಮೀಜಿ ಅವರು ಮೊದಲು ರಥ ಏರಿ ನಂತರ ಗೊರುಚ ಅವರಿಗೆ ಸಹಾಯ ಹಸ್ತ ಚಾಚಿ ರಥಕ್ಕೆ ಬರಮಾಡಿಕೊಂಡರು.
ಗೊರುಚ ಅವರಿಗೆ ಸುಗಂಧರಾಜ ಹೂವು ಮತ್ತು ರೇಷ್ಮೆ ಹಾರ ಹಾಕಿ, ಮೈಸೂರು ಪೇಟ ತೊಡಿಸಿ, ಶಾಲು ಹೊದಿಸಿ ಸನ್ಮಾನಿಸಿದರು.
ಹಿಮ್ಮೇಳದಲ್ಲಿ "ಮರೆಯಬೇಡವೋ ಕನ್ನಡ ನಾಡ, ನೀ ತೊರೆಯಬೇಡವೂ ಕನ್ನಡ ನುಡಿಯ, ಎಚ್ಚರವಾಗು ಕನ್ನಡಿಗ" ಹಾಡು ಪ್ರತಿಧ್ವನಿಸಿತು.
ಪುರುಷೋತ್ತಮಾನಂದನಾಥ ಸ್ವಾಮೀಜಿ, ಕಸಾಪ ಅಧ್ಯಕ್ಷ ಮಹೇಶ ಜೋಶಿ, ಸಚಿವ ಚಲುವರಾಯಸ್ವಾಮಿ, ಶಾಸಕರಾದ ಪಿ.ರವಿಕುಮಾರ್, ಪಿ.ಎಂ.ನರೇಂದ್ರಸ್ವಾಮಿ, ರಮೇಶ ಬಂಡಿಸಿದ್ದೇಗೌಡ, ಮೀರಾ ಶಿವಲಿಂಗಯ್ಯ ಮುಂತಾದ ಗಣ್ಯರು ಪಾಲ್ಗೊಂಡಿದ್ದರು.
ಒಂದೂವರೆ ಗಂಟೆ ತಡವಾಗಿ ಆರಂಭವಾದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಆರಂಭವಾಗಿದೆ.
ವಿವಿಧ ಜಿಲ್ಲೆ ಮತ್ತು ಹೊರರಾಜ್ಯಗಳ 157 ಕಲಾತಂಡಗಳು 2,250 ಕಲಾವಿದರು ಭಾಗಿಯಾಗಿದ್ದಾರೆ. ಮೆರವಣಿಗೆಗೆ ಚಾಲನೆ ನೀಡಬೇಕಿದ್ದ ಮೈಸೂರು ಅರಮನೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಗೈರಾಗಿದ್ದಾರೆ.
ಮಂಡ್ಯ ನಗರದ ಸರ್ ಎಂ ವಿಶ್ವೇಶ್ವರಯ್ಯ ಪ್ರತಿಮೆ ಮುಂಭಾಗದಿಂದ ಸ್ಯಾಂಜೋ ಆಸ್ಪತ್ರೆಯ ಹಿಂಭಾಗದ ಸಮ್ಮೇಳನದ ವೇದಿಕೆ ಸ್ಥಳಕ್ಕೆ ಆರು ಕಿಲೋಮೀಟರ್ ಅಂತರದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಬೆಳಿಗ್ಗೆ ಏಳು ಗಂಟೆಗೆ ಆರಂಭವಾಗಬೇಕಿತ್ತು. ಆದರೆ ಬೆಳಗ್ಗೆ 8:25ಕ್ಕೆ ಆರಂಭಗೊಂಡಿತು.
ಸಮ್ಮೇಳನಾಧ್ಯಕ್ಷರ ಮೆರವಣಿಗೆಗೆ ಮೈಸೂರು ಅರಮನೆ ರಾಜವಂಶಸ್ಥೆ ಪ್ರಮೋದಾದೇವಿ ಒಡೆಯರ್ ಚಾಲನೆ ನೀಡಬೇಕಿತ್ತು. ಅವರು ಗೈರು ಹಾಜರಿಯಾದ ಕಾರಣ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಚಾಲನೆ ನೀಡಿದರು.
ಮೆರವಣಿಗೆಯಲ್ಲಿ ನಂದಿಧ್ವಜ, ನಾದಸ್ವರ, ವೀರಗಾಸೆ, ತಮಟೆ, ಪೂಜಾ ಕುಣಿತ, ಡೊಳ್ಳು ಕುಣಿತ, ಹಾಲಕ್ಕಿ ಸುಗ್ಗಿ ಕುಣಿತ, ಕಂಸಾಳೆ, ಮಹಿಳಾ ವೀರಗಾಸೆ, ಕೀಲು ಕುದುರೆ, ಪಟ ಕುಣಿತ, ಪೂಜಾ ಕುಣಿತ, ತಮಟೆ ಸೇರಿದಂತೆ 157 ಕಲಾತಂಡಗಳು 2,250 ಕಲಾವಿದರು ಪಾಲ್ಗೊಂಡಿದ್ದಾರೆ.
31 ಜಿಲ್ಲೆಯಿಂದ 38 ಕಲಾತಂಡಗಳು ಹಾಗೂ ಆರು ಹೊರರಾಜ್ಯಗಳ ಕಲಾತಂಡಗಳು ಭಾಗವಹಿಸಿರುವುದು ವಿಶೇಷವಾಗಿದೆ.