ಕಾಸರಗೋಡು: ಪರಿಶಿಷ್ಟ ಜಾತಿ ಅಭಿವೃದ್ಧಿ ಇಲಾಖೆಯು ಸಾಮಾಜಿಕ ಐಕ್ಯತಾ ವಾರಾಚರಣೆ ಯೋಜನೆ ಅಂಗವಾಗಿ ಪುಲ್ಲೂರ್‍ಪೆರಿಯ ಗ್ರಾಮ ಪಂಚಾಯಿತಿಯ ಕಾಲಿಯಡ್ಕ ಚೆಂಗರ ವಿಜ್ಞಾನವಾಡಿಯಲ್ಲಿ ವಿಜ್ಞಾನೋತ್ಸವವನ್ನು ಆಯೋಜಿಸಿತ್ತು. ಈ ಸಂದರ್ಭ ಕಲರ್ಸ್ ಸೇವ್ ಕ್ಲಬ್ ಸದಸ್ಯರು ಮತ್ತು ಸ್ಥಳೀಯರು ಪ್ರಸ್ತುತಪಡಿಸಿದ ಕಲಾ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಸನ್ಮಾನಿಸಲಾಯಿತು.
ಪುಲ್ಲೂರು ಪೆರಿಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಸಿ.ಕೆ.ಅರವಿಂದಾಕ್ಷನ್ ಸಮಾರಂಭ ಉದ್ಘಾಟಿಸಿದರು. ಗ್ರಾಮ ಪಂಚಾಯಿತಿ ಸದಸ್ಯೆ ಟಿ.ಅಂಬಿಕಾ ಅಧ್ಯಕ್ಷತೆ ವಹಿಸಿದ್ದರು. ಯೋಜನಾ ಪ್ರದೇಶದಲ್ಲಿ ಮನೆಗಳಿಗೆ ಸಂಖ್ಯೆ ಸಿಗದಿರುವ ಸಮಸ್ಯೆಯನ್ನು ಶೀಘ್ರ ಪರಿಹರಿಸಲಾಗುವುದು ಎಂದು ಅಧ್ಯಕ್ಷರು ತಿಳಿಸಿದರು. ಹಿರಿಯ ನಾಗರಿಕರಾದ ಕೆ.ತಂಗಪ್ಪನ್, ಕೆ.ಗೋಪಾಲಕೃಷ್ಣನ್, ಥಾಮಸ್ ಮತ್ತು ಶ್ರೀಧರನ್ ಪಿಳ್ಳೆ ಅವರಿಗೆ ವಿಜ್ಞಾನೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿವಿಧ ಪಬ್ಲಿಕ್ ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಅಯ್ಯಂಕಾಳಿ ಸ್ಮಾರಕ ವಿದ್ಯಾರ್ಥಿ ವೇತನ ಪಡೆದ ವಿಜಯನ್ ಅವರನ್ನು ಸನುಷಾ ಅಭಿನಂದಿಸಿದರು. ವಿ.ಸಿ.ಮಣಿಯನ್, ಸಮುದಾಯದ ಸಮಾಜ ಸೇವಕಿ ರಮ್ಯಾ ಟಿ.ಎಸ್, ಉಸೈನಾ, ಅಖಿಲಾ, ಅಭಿರಾಮಿ ಮೊದಲಾದವರು ಉಪಸ್ಥೀತರಿದ್ದರು. ಎಸ್‍ಸಿಡಿಒ ಬಶೀರ್ ಪಿ.ಬಿ ಸ್ವಾಗತಿಸಿದರು. ಪ್ರವರ್ತಕ ಅಜಿತ್ ಕೆ ವಂದಿಸಿದರು.