ಬದಿಯಡ್ಕ: ಗೀತಾಜ್ಞಾನ ಯಜ್ಞ ಪಾರಾಯಣ ಘಟಕ ಬದಿಯಡ್ಕದ ವತಿಯಿಂದ ಗೀತಾಜಯಂತಿ ಆಚರಿಸಲಾಯಿತು. ಸಂಚಾಲಕ ಶಶಿಕಲಾ ಸಂಪತ್ತಿಲ, ಲಕ್ಷ್ಮೀ ಜಿ ಪೈ ಕಾರ್ಯಕ್ರಮವನ್ನು ಆಯೋಜಿಸಿದ್ದರು. ಗೀತಾಜ್ಞಾನಯಜ್ಞ ಟ್ರಸ್ಟ್ ಜೊತೆ ಕಾರ್ಯದರ್ಶಿ ವಿಜಯ ಕಾನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಅವರು ಮಾತನಾಡಿ ಕರ್ಮ ಸಂನ್ಯಾಸವನ್ನು ಕೈಗೊಳ್ಳದೆ, ಲೋಕ ಸಂಗ್ರಹಕ್ಕಾಗಿ ಕರ್ಮಗಳನ್ನು ಮಾಡಿದ ಜನಕ ಮಹಾರಾಜನನ್ನು ಉದಾಹರಿಸಿ, ಧರ್ಮ ಸಂರಕ್ಷಣೆಯ ಕಾರ್ಯಕ್ಕೆ ಅರ್ಜುನನು ಶ್ರೀಕೃಷ್ಣ ಪರಮಾತ್ಮನ ನಿರ್ದೇಶನಗಳನ್ನು ಪಾಲಿಸಿ ಕರ್ಮಗಳನ್ನು ಮಾಡಿದಂತೆ ಪ್ರತಿಯೊಬ್ಬರು ಕರ್ಮನಿರತರಾಗಬೇಕೆಂದು ಕರೆಕೊಟ್ಟರು.
ಪ್ರಗತಿಪರ ಕೃಷಿಕ, ವೈದ್ಯ ಹಾಗೂ ಧಾರ್ಮಿಕ ಮುಖಂಡ ಡಾ, ವೇಣುಗೋಪಾಲ ಕಳಯತ್ತೊಡಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ, ನಾಡಿನಾದ್ಯಂತ ಗೀತಾ ಪಾರಾಯಣ ತಂಡಗಳನ್ನು ಕಟ್ಟಿಕೊಂಡು, ಗೀತಾ ಸಂದೇಶಗಳನ್ನು ನೀಡುತ್ತಿರುವ ಕಾರ್ಯವು ಹಿಂದೂ ಸಂಸ್ಕøತಿಯ ರಕ್ಷಣೆಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತಿದೆ ಎಂದರು.
ಭಗವದ್ಗೀತೆಯ ಧ್ಯಾನ ಶ್ಲೋಕ, 12 ಮತ್ತು 15ನೆಯ ಅಧ್ಯಾಯಗಳ ಪಾರಾಯಣ ಮಾಡಲಾಯಿತು. ವಿದ್ಯಾರ್ಥಿಗಳಿಂದ ಶ್ಲೋಕ ಪಠಣ, ಗೀತಾ ಪಾರಾಯಣ ಸದಸ್ಯರಿಂದ ಓಂಕಾರ, ಶಂಖನಾದ, ಭಜನೆ, ಪಂಚಾಂಗ ಪಠಣ, ಧ್ಯೇಯಗೀತೆ, ಸಂಘಟನಾ ಮಂತ್ರ, ಗೀತಾ ಮಹಾತ್ಮೆ, ಚಿಂತನ, ಶಾಂತಿ ಮಂತ್ರ ಜರಗಿತು. ಕವಿತಾ ಶೇಡಿಗುಮ್ಮೆ ಕಾರ್ಯಕ್ರಮ ನಿರೂಪಿಸಿದರು.ಮೇಘಾ ಸ್ವಾಗತಿಸಿ, ಹೇಮಲತಾ ವಂದಿಸಿದರು.