ನವದೆಹಲಿ: ಬ್ರಿಟಿಷರಿಂದ ಅಧಿಕಾರ ಹಸ್ತಾಂತರವಾಗಿರುವುದರ ಸಂಕೇತ ಎನಿಸಿರುವ 'ಸೆಂಗೋಲ್'(ರಾಜದಂಡ) ವಿಚಾರವಾಗಿ ಬಿಜೆಪಿ ಹಾಗೂ ಕಾಂಗ್ರೆಸ್ ಸಂಸದರ ನಡುವಿನ ವಾಗ್ವಾದಕ್ಕೆ ರಾಜ್ಯಸಭೆ ಕಲಾಪ ಮಂಗಳವಾರ ಸಾಕ್ಷಿಯಾಯಿತು.
'ಸಂಸತ್‌ನಲ್ಲಿ ಸ್ಥಾಪಿಸಲಾಗಿರುವ ಸೆಂಗೋಲ್‌ನ ಮಹತ್ವ ಕುರಿತು ಸತ್ಯಕ್ಕೆ ದೂರವಾದ ಕತೆ ಕಟ್ಟಲಾಗಿದೆ' ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ದೂರಿದರೆ, ಆಡಳಿತ ಪಕ್ಷಗಳು ಈ ಮಾತಿಗೆ ತಿರುಗೇಟು ನೀಡಿದವು.
ಸಂವಿಧಾನ ಅಳವಡಿಸಿಕೊಂಡಿರುವುದಕ್ಕೆ 75 ವರ್ಷ ತುಂಬಿರುವ ಕುರಿತು ನಡೆದ ಚರ್ಚೆ ವೇಳೆ ಕೇಂದ್ರ ಸಚಿವ ಭೂಪೇಂದ್ರ ಯಾದವ್, ಸೆಂಗೋಲ್ ಕುರಿತು ಪ್ರಸ್ತಾಪಿಸಿದ್ದು, ಜಟಾಪಟಿಗೆ ಕಾರಣವಾಯಿತು.
'ಬ್ರಿಟಿಷರು ಅಧಿಕಾರ ಹಸ್ತಾಂತರಿಸುವ ವೇಳೆ ನೀಡಿದ್ದ ಸೆಂಗೋಲ್, ನ್ಯಾಯದ ಸಂಕೇತವಾಗಿದೆ. ಆದರೆ, ಇದನ್ನು ಜವಾಹರ ಲಾಲ್ ನೆಹರೂ ಅವರ ಊರುಗೋಲು ಎಂಬಂತೆ ಬಿಂಬಿಸಲಾಗಿತ್ತು' ಎಂದು ಯಾದವ್ ಹೇಳಿದರು.
ಇದಕ್ಕೆ ಕಾಂಗ್ರೆಸ್‌ನ ಜೈರಾಮ್ ರಮೇಶ್ ಆಕ್ಷೇಪಿಸಿ, ಸೆಂಗೋಲ್ ಅನ್ನು ಯಾರಿಗೂ ಕೊಟ್ಟಿರಲಿಲ್ಲ ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಯಾದವ್, 'ಈ 75 ವರ್ಷ ಸೆಂಗೋಲ್ ಅನ್ನು ಎಲ್ಲಿ ಇಡಲಾಗಿತ್ತು ಎಂಬ ಬಗ್ಗೆ ಜೈರಾಮ್ ರಮೇಶ್ ಮಾತನಾಡಿಲ್ಲ' ಎಂದು ತಿವಿದರು.
ಸಭಾಪತಿ ಪೀಠದಲ್ಲಿದ್ದ ರಾಜೀವ್ ಶುಕ್ಲಾ, ರಮೇಶ್ ಅವರಿಗೆ ಮಾತನಾಡಲು ಅವಕಾಶ ನೀಡಿದರು.
'ಸೆಂಗೋಲ್ ಕುರಿತು ಆಡಳಿತ ಪಕ್ಷ ಕತೆಯೊಂದನ್ನು ಹಬ್ಬಿಸಿದೆ. ಇದು ಇತಿಹಾಸವೇ ಅಲ್ಲ' ಎಂದು ರಮೇಶ್ ಹೇಳಿದರು.
ಆಗ ಮಧ್ರಪ್ರವೇಶಿಸಿದ ಜೆ.ಪಿ.ನಡ್ಡಾ,'ಅಧಿಕಾರ ಹಸ್ತಾಂತರ ಪ್ರಕ್ರಿಯೆ ಕುರಿತು ಲಾರ್ಡ್ ಮೌಂಟ್‌ಬ್ಯಾಟನ್ ಅವರು ನೆಹರೂ ಅವರಲ್ಲಿ ಮಾಹಿತಿ ಕೇಳಿದ್ದರು. ನೆಹರೂ ನೆರವಿಗೆ ಬಂದಿದ್ದ ಸಿ.ರಾಜಗೋಪಾಲಾಚಾರಿ, ಚೋಳ ರಾಜರ ಆಳ್ವಿಕೆ ವೇಳೆ ಸೆಂಗೋಲ್ ನೀಡುವ ಮೂಲಕ ಅಧಿಕಾರ ಹಸ್ತಾಂತರಿಸುವ ಪದ್ಧತಿ ರೂಢಿ ಇರುವ ಕುರಿತು ತಿಳಿಸಿದ್ದರು' ಎಂದು ವಿವರಿಸಿದರು.
ಈ ಹೇಳಿಕೆಗೆ ವಿರೋಧ ಪಕ್ಷಗಳ ಸದಸ್ಯರು ಆಕ್ಷೇಪಿಸಿದ್ದರಿಂದ ಸದನದಲ್ಲಿ ಮತ್ತೆ ಗದ್ದಲ ಶುರುವಾಯಿತು.