ಹೈದರಾಬಾದ್: ಉಸ್ಮಾನಿಯಾ ವಿಶ್ವವಿದ್ಯಾಲಯದ ಜಂಟಿ ಕ್ರಿಯಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ವ್ಯಕ್ತಿಗಳ ಗುಂಪೊಂದು ತೆಲುಗಿನ ನಟ ಅಲ್ಲು ಅರ್ಜುನ್ ಅವರ ನಿವಾಸದಲ್ಲಿ ದಾಂಧಲೆ ನಡೆಸಿದ್ದು, ಹೂವಿನ ಕುಂಡಗಳು ಸೇರಿದಂತೆ ಇತರ ವಸ್ತುಗಳನ್ನು ಧ್ವಂಸಗೊಳಿಸಿದೆ.
ಇತ್ತೀಚೆಗೆ 'ಪುಷ್ಪ 2: ದಿ ರೂಲ್' ಸಿನಿಮಾ ಪ್ರದರ್ಶನದ ವೇಳೆ ಉಂಟಾದ ನೂಕುನುಗ್ಗಲು ಮತ್ತು ಕಾಲ್ತುಳಿತದಲ್ಲಿ ಮಹಿಳೆಯೊಬ್ಬರು ಮೃತಪಟ್ಟ ಪ್ರಕರಣ ಸಂಬಂಧ ಸಂತ್ರಸ್ತರ ಕುಟುಂಬಕ್ಕೆ ₹1 ಕೋಟಿ ಪರಿಹಾರ ನೀಡುವಂತೆ ಆಗ್ರಹಿಸಿ ಪ್ರತಿಭಟನಾಕಾರರು ಅಲ್ಲು ಅರ್ಜುನ್ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ.
'ಸಿನಿಮಾಗಳಲ್ಲಿ ನಟರು ಕೋಟ್ಯಂತರ ರೂಪಾಯಿ ಸಂಪಾದನೆ ಮಾಡುತ್ತಿದ್ದಾರೆ. ಇತ್ತ ಸಿನಿಮಾ ನೋಡುವವರು ಸಾಯುತ್ತಿದ್ದಾರೆ' ಎಂಬ ನಾಮಫಲಕಗಳನ್ನು ಹಿಡಿದು ಪ್ರತಿಭಟನಾಕಾರರು ಆಕ್ರೋಶ ಹೊರಹಾಕಿದ್ದಾರೆ.
ಸದ್ಯ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಯಾಗಿದೆ.
ಮೃತಪಟ್ಟ ಮಹಿಳೆಯ ಕುಟುಂಬಕ್ಕೆ ಅಲ್ಲು ಅರ್ಜುನ್ ಅವರು ಈಚೆಗೆ ₹25 ಲಕ್ಷ ನೆರವು ಘೋಷಿಸಿದ್ದರು. ಈ ಕುರಿತ ವಿಡಿಯೊವನ್ನು 'ಎಕ್ಸ್'ನಲ್ಲಿ ಪೋಸ್ಟ್ ಮಾಡಿದ್ದ ಅವರು, 'ಈ ದುರ್ಘಟನೆ ಬಹಳ ಬೇಸರ ತರಿಸಿದೆ. ಮೃತರ ಕುಟುಂಬದವರ ದುಃಖದಲ್ಲಿ ನಾನೂ ಭಾಗಿಯಾಗಿದ್ದೇನೆ. ಅವರ ಕುಟುಂಬದ ಸದಸ್ಯರನ್ನು ವೈಯಕ್ತಿಕವಾಗಿ ಭೇಟಿಯಾಗುತ್ತೇನೆ' ಎಂದು ಹೇಳಿದ್ದರು.
ಸಂಧ್ಯಾ ಚಿತ್ರಮಂದಿರದಲ್ಲಿ ಈಚೆಗೆ ಪ್ರೀಮಿಯರ್ ಶೋ ವೇಳೆ ಜನ ದಟ್ಟಣೆ ಹೆಚ್ಚಿದ ಪರಿಣಾಮ ಉಸಿರುಗಟ್ಟಿ ರೇವತಿ (35) ಎಂಬುವವರು ಮೃತಪಟ್ಟಿದ್ದರು. ಅವರ ಮಗ ಶ್ರೀತೇಜ್ (8) ಆರೋಗ್ಯ ಸ್ಥಿತಿ ಗಂಭೀರವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾಲಕನ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಭರಿಸುವುದಾಗಿ ನಟ ತಿಳಿಸಿದ್ದಾರೆ.
ಮಹಿಳೆಯ ಕುಟುಂಬದವರು ನೀಡಿದ ದೂರಿನ ಮೇರೆಗೆ ಪೊಲೀಸರು ಅಲ್ಲು ಅರ್ಜುನ್, ಅವರ ಭದ್ರತಾ ತಂಡ ಮತ್ತು ಚಿತ್ರಮಂದಿರದ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.