ಗುವಾಹಟಿ: ನಾಗಲ್ಯಾಂಡ್ ನ ಪೂರ್ವ ಅಂಚಿನಲ್ಲಿರುವ ಆರು ಹಿಂದುಳಿದ ಜಿಲ್ಲೆಗಳ ಜನರಿಗಾಗಿ ಪ್ರತ್ಯೇಕ ರಾಜ್ಯದ ಸ್ಥಾನಮಾನಕ್ಕಾಗಿ ಹೋರಾಡುತ್ತಿರುವ ಬುಡಕಟ್ಟು ಸಂಘಟನೆಯೊಂದು ಕಾರ್ಯನಿರ್ವಹಕ, ಶಾಸಕಾಂಗ ಮತ್ತು ಆರ್ಥಿಕ ಸ್ವಾಯತ್ತತೆಯೊಂದಿಗೆ ವಿಶಿಷ್ಟ ವ್ಯವಸ್ಥೆಯ ಕೇಂದ್ರದ 'ಫ್ರಾಂಟಿಯರ್ ನಾಗಾ ಪ್ರಾಂತ್ಯ' ಆಫರ್ ನ್ನು ಒಪ್ಪಿಕೊಂಡಿದೆ.
ಡಿಸೆಂಬರ್ 13 ರಂದು ನವದೆಹಲಿಯಲ್ಲಿ ನಡೆದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರತಿನಿಧಿಗಳೊಂದಿಗಿನ ಸಭೆಯ ನಂತರ ಕೇಂದ್ರದ ಆಫರ್ ಒಪ್ಪಿಕೊಳ್ಳುವ ನಿರ್ಧಾರ ಕೈಗೊಳ್ಳಲಾಯಿತು ಎಂದು ಈಸ್ಟರ್ನ್ ನಾಗಾಲ್ಯಾಂಡ್ ಪೀಪಲ್ಸ್ ಆರ್ಗನೈಸೇಶನ್ (ENPO) ಹೇಳಿದೆ. ಗೃಹ ಕಾರ್ಯದರ್ಶಿ ಗೋವಿಂದ್ ಮೋಹನ್ ಕೇಂದ್ರ ತಂಡದ ನೇತೃತ್ವ ವಹಿಸಿದ್ದರು. ಇದೇ ವರ್ಷದ ಆಗಸ್ಟ್ 13ರಂದು ಗುವಾಹಟಿಯಲ್ಲಿ ತ್ರಿಪಕ್ಷೀಯ ಸಭೆ ನಡೆದಿತ್ತು.'
ಸಭೆಯಲ್ಲಿ 'ಫ್ರಾಂಟಿಯರ್ ನಾಗಾಲ್ಯಾಂಡ್' ಪ್ರತ್ಯೇಕ ರಾಜ್ಯ ಪೂರ್ವ ನಾಗಲ್ಯಾಂಡ್ ಜನರ ಬೇಡಿಕೆಯಾಗಿದೆ ಎಂಬ ನಿಲುವನ್ನು ಸ್ಪಷ್ಟಪಡಿಸಲಾಯಿತು. ಆದಾಗ್ಯೂ ಸದ್ಯದ ಹಂತದಲ್ಲಿ ಕೇಂದ್ರ ಸರ್ಕಾರದ ತೊಡಕುಗಳನ್ನು ಪರಿಗಣಿಸಿ ಕಾರ್ಯನಿರ್ವಾಹಕ, ಶಾಸಕಾಂಗ ಮತ್ತು ಆರ್ಥಿಕ ಸ್ವಾಯತ್ತತೆಯೊಂದಿಗೆ ವಿಶಿಷ್ಟವಾದ 'ಫ್ರಾಂಟಿಯರ್ ನಾಗಾ ಪ್ರಾಂತ್ಯ' ಪ್ರಸ್ತಾಪವನ್ನು ತಾತ್ಕಾಲಿಕವಾಗಿ ಒಪ್ಪಿಕೊಳ್ಳಲು ನಿರ್ಧರಿಸಲಾಗಿದೆ. ಕೆಲವು ಬಗೆಹರಿಸಲಾಗದ ಸಮಸ್ಯೆಗಳ ಕುರಿತು ಚರ್ಚಿಸಲು ಜನವರಿ ಎರಡನೇ ವಾರದೊಳಗೆ ಮುಂದಿನ ತ್ರಿಪಕ್ಷೀಯ ಸಭೆಯನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ENPO ಹೇಳಿಕೆಯಲ್ಲಿ ತಿಳಿಸಿದೆ.
ಕಳೆದ ವರ್ಷ ವಿಧಾನಸಭೆ ಚುನಾವಣೆಗೂ ಮುನ್ನಾ ಕೇಂದ್ರ ಗೃಹ ಸಚಿವ ಅಮಿತ್ ಶಾ ಹಾಗೂ ನಾಗಲ್ಯಾಂಡ್ ಮುಖ್ಯಮಂತ್ರಿ ನೆಫಿಯು ರಿಯೊ ಅವರು, ಬಿಜೆಪಿ-ನ್ಯಾಷನಲಿಸ್ಟ್ ಡೆಮಾಕ್ರಟಿಕ್ ಪ್ರೋಗ್ರೆಸಿವ್ ಪಾರ್ಟಿಯು ರಾಜ್ಯದಲ್ಲಿ ಅಧಿಕಾರವನ್ನು ಉಳಿಸಿಕೊಂಡರೆ ನಾಗಾಲ್ಯಾಂಡ್ ಸರ್ಕಾರದ ಸಂಪೂರ್ಣ ಸಹಕಾರದೊಂದಿಗೆ ENPO ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದು ಭರವಸೆ ನೀಡಿದ್ದರು.