ಕಾಸರಗೋಡು : ವಿದ್ಯಾನಗರ ಸರ್ಕಾರಿ ಕಾಲೇಜು 2024-25 ನೇ ಶೈಕ್ಷಣಿಕ ವರ್ಷದ 'ಕನ್ನಡ ಸಂಘ'ದ ಉದ್ಘಾಟನಾ ಸಮಾರಂಭ ಕಾಲೇಜು ಸಭಾಂಗಣದಲ್ಲಿ ಜರುಗಿತು. ಕಾಲೇಜು ಪ್ರಾಂಶುಪಾಲ ಡಾ.ವಿ.ಎಸ್.ಅನಿಲ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ಸಂಘದ ವತಿಯಿಂದ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕೋರುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಸಮಾರಂಭದಲ್ಲಿ ಸ್ಯಾಂಡಲ್ ವುಡ್ ಚಿತ್ರರಂಗದ ಖ್ಯಾತ ಪತ್ರಕರ್ತ ಗಣೇಶ್ ಕಾಸರಗೋಡು ಹಾಗೂ ಕನ್ನಡ ಚಲನಚಿತ್ರ ನಿರ್ದೇಶಕ ಗಿರಿ ಕೃಷ್ಣ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ.ಎಸ್ ಉಪಸ್ಥಿತರಿದ್ದರು. ಈ ಸಂದರ್ಭ ಗಣೇಶ್ ಕಾಸರಗೋಡು ಅವರ ಮೌನ ಮಾತಾದಾಗ, ಚದುರಿದ ಚಿತ್ರಗಳು,ಬಣ್ಣ ಮಾಸಿದ ಬದುಕು, ಶುಭಂ ಹಾಗು ಹಳೇ ಸಿನಿಮಾದ ಕೊನೆಯ ಫ್ರೇಮು ಎಂಬ ಪುಸ್ತಕಗಳನ್ನು ಕನ್ನಡ ವಿಭಾಗದ ಗ್ರಂಥಾಲಯಕ್ಕೆ ಕೊಡುಗೆಯಾಗಿ ನೀಡಿದರು. ಕನ್ನಡ ವಿಭಾಗದ ನೂತನ ಕಾರ್ಯದರ್ಶಿ ಕಿಶೋರ್ ಕುಮಾರ್ ಅವರು ಮುಖ್ಯ ಅತಿಥಿಗಳಿಗೆ ಶಾಲು ಹೊದಿಸಿ ಗೌರವಿಸಿದರು.
ಸಮಾರಂಭದಲ್ಲಿ ಗಾಯತ್ರಿಗಣೇಶ್ ಕಾಸರಗೋಡು, ಕನ್ನಡ ವಿಭಾಗದ ಪ್ರಾಧ್ಯಾಪಕರಾದ ಡಾ. ಬಾಲಕೃಷ್ಣ ಹೊಸಂಗಡಿ, ಡಾ ಶ್ರೀಧರ ಎನ್ , ಡಾ ಸವಿತಾ ಬಿ, ಡಾ ವೇದಾವತಿ ಎಸ್, ಡಾ ಆಶಾಲತಾ ಸಿ ಕೆ ಮತ್ತು ಲಕ್ಷ್ಮೀ, 2024-2025ನೇ ಶೈಕ್ಷಣಿಕ ವರ್ಷದಲ್ಲಿ ಕಾಲೇಜು ಉಪಾಧ್ಯಕ್ಷೆಯಾಗಿ ಆಯ್ಕೆಯಾದ ಜಸ್ನ ಉಪಸ್ಥಿತರಿದ್ದರು. ಅನಿರುದ್ಧ ಭಟ್ ಸ್ವಾಗತಿಸಿದರು. ದೀಪ್ತಿ.ಎಂ ಕಾರ್ಯಕ್ರಮ ನಿರ್ವಹಿಸಿದರು. ಕಿಶೋರ್ ಕುಮಾರ್ ವಂದಿಸಿದರು.