ನವದೆಹಲಿ: ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ (ಎನ್‌ಎಚ್‌ಆರ್‌ಸಿ) ಮುಖ್ಯಸ್ಥರ ಹುದ್ದೆಗೆ ತಮ್ಮನ್ನು ಪರಿಗಣಿಸಲಾಗುತ್ತಿದೆ ಎನ್ನುವ ಮಾಧ್ಯಮ ವರದಿಗಳನ್ನು ಸುಪ್ರೀಂ ಕೋರ್ಟ್ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಶುಕ್ರವಾರ ಅಲ್ಲಗಳೆದಿದ್ದಾರೆ.
'ಈ ವರದಿಗಳು ಸತ್ಯಕ್ಕೆ ದೂರವಾಗಿವೆ. ಪ್ರಸ್ತುತ, ನಿವೃತ್ತ ಜೀವನದಲ್ಲಿ ಸಂತೋಷದಿಂದ ಇದ್ದೇನೆ' ಎಂದು ಅವರು ಹೇಳಿದ್ದಾರೆ.
ಎನ್‌ಎಚ್‌ಆರ್‌ಸಿ ಮುಖ್ಯಸ್ಥರ ಹುದ್ದೆಯು ಜೂನ್ 1ರಿಂದ ಖಾಲಿ ಉಳಿದಿದೆ..
ಎನ್‌ಎಚ್‌ಆರ್‌ಸಿ ಮುಖ್ಯಸ್ಥರ ಆಯ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯು ಡಿಸೆಂಬರ್ 18ರಂದು ಸಭೆ ನಡೆಸಿತ್ತು.
ಸಭೆಯಲ್ಲಿ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಮತ್ತು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ಅವರು ಭಾಗವಹಿಸಿದ್ದರು.