ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಜಂಟಿ ಸಂಸದೀಯ ಸಮಿತಿಯು (ಜೆಪಿಸಿ), ವಕ್ಫ್ ಮಂಡಳಿಗಳು ಹಕ್ಕು ಸಾಧಿಸಿರುವ ಆಸ್ತಿಗಳು ಮತ್ತು ಸರ್ಕಾರ ಅಥವಾ ಸರ್ಕಾರಿ ಸಂಸ್ಥೆಗಳ ಅನಧಿಕೃತ ಸ್ವಾಧೀನದಲ್ಲಿರುವ ವಕ್ಫ್ ಆಸ್ತಿಗಳ ವಿವರ ಸಲ್ಲಿಸುವಂತೆ ವಿವಿಧ ರಾಜ್ಯಗಳಿಗೆ ಸೂಚಿಸಿದೆ.
ರಾಜ್ಯ ಸರ್ಕಾರಗಳು ಅಥವಾ ಅವುಗಳ ಅಧಿಕೃತ ಸಂಸ್ಥೆಗಳ ಅನಧಿಕೃತ ವಶದಲ್ಲಿರುವ ವಕ್ಫ್ ಆಸ್ತಿಗಳ ಕುರಿತು ಸಾಚಾರ್ ಸಮಿತಿಯಲ್ಲಿ ಉಲ್ಲೇಖಿಸಿರುವ ಅಂಶಗಳ ಕುರಿತು ನವೀಕೃತ ಮಾಹಿತಿ ಪಡೆಯಲು ಸಂಸದೀಯ ಸಮಿತಿಯು ನಿರ್ಧರಿಸಿದೆ. ಅಲ್ಲದೆ, ವಕ್ಫ್ ಕಾಯಿದೆಯ ಸೆಕ್ಷನ್ 40 ಅನ್ನು ಚಲಾಯಿಸಿ ವಕ್ಫ್ ಮಂಡಳಿಗಳು ಹಕ್ಕು ಸಾಧಿಸಿರುವ ಆಸ್ತಿಗಳ ವಿವರಗಳನ್ನು ರಾಜ್ಯಗಳಿಂದ ಸಮಿತಿ ಕೇಳಿದೆ.
ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವಾಲಯದ ಮೂಲಕ ರಾಜ್ಯಗಳಿಂದ ಮಾಹಿತಿಯನ್ನು ಸಮಿತಿ ಸಂಗ್ರಹಿಸುತ್ತಿದೆ ಎಂದು ಮೂಲಗಳು ತಿಳಿಸಿವೆ.
2005-06ರ ಅವಧಿಯಲ್ಲಿ ವಿವಿಧ ರಾಜ್ಯಗಳ ವಕ್ಫ್ ಮಂಡಳಿಗಳು ಅನಧಿಕೃತ ಒತ್ತುವರಿ ಕುರಿತು ಸಾಚಾರ್ ಸಮಿತಿಗೆ ಮಾಹಿತಿ ನೀಡಿದ್ದವು.
ಇಂತಹ ಆಸ್ತಿಗಳು ದೆಹಲಿಯಲ್ಲಿ 316, ರಾಜಸ್ಥಾನದಲ್ಲಿ 60 ಮತ್ತು ಕರ್ನಾಟಕದಲ್ಲಿ 42, ಮಧ್ಯಪ್ರದೇಶದಲ್ಲಿ 53, ಉತ್ತರ ಪ್ರದೇಶದಲ್ಲಿ 60 ಹಾಗೂ ಒಡಿಶಾದಲ್ಲಿ 53 ಇರುವುದಾಗಿ ಸಾಚಾರ್ ಸಮಿತಿ 2005-06ರಲ್ಲಿ ವರದಿ ಸಲ್ಲಿಸಿರುವುದನ್ನು ಬಿಜೆಪಿ ಸಂಸದ ಜಗದಂಬಿಕಾ ಪಾಲ್ ಅವರ ಅಧ್ಯಕ್ಷರಾಗಿರುವ ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲನೆಯ ಜಂಟಿ ಸಂಸದೀಯ ಸಮಿತಿಯು ಗಮನಿಸಿದೆ. ಈ ಎಲ್ಲ ಆರು ರಾಜ್ಯಗಳಿಂದ ನವಿಕೃತ ಮಾಹಿತಿಯನ್ನು ಕೋರಿದೆ. ಅಲ್ಲದೆ, ಸಮಿತಿಯು ಒಂದಷ್ಟು ಮಾಹಿತಿ ಪಡೆದುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
2013ರಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಅವಧಿಯಲ್ಲಿ ಜಾರಿಗೆ ತಂದ ತಿದ್ದುಪಡಿಯಾದ ಸೆಕ್ಷನ್ 40, ಅತ್ಯಂತ ವಿವಾದಾತ್ಮಕ ಕಾನೂನುಗಳಲ್ಲಿ ಒಂದೆನಿಸಿದೆ. ಇದು ಯಾವುದೇ ಆಸ್ತಿ ವಕ್ಫ್‌ಗೆ ಸೇರಿದೆಯೇ ಅಥವಾ ಇಲ್ಲವೇ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ವಕ್ಫ್ ಮಂಡಳಿಗಳಿಗೆ ನೀಡಿದೆ.
ಭಾರತದಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಯನ್ನು ಅಧ್ಯಯನ ಮಾಡಲು ಯುಪಿಎ ಸರ್ಕಾರವು 2005ರಲ್ಲಿ ಸಾಚಾರ್ ಸಮಿತಿ ರಚಿಸಿತ್ತು. ಈ ಸಮಿತಿಯು 2006ರಲ್ಲಿ ತನ್ನ ವರದಿ ಸಲ್ಲಿಸಿತ್ತು.
ಈ ಸಮಿತಿಯ ಅಧಿಕಾರಾವಧಿಯನ್ನು ಸಂಸತ್‌ನ ಮುಂದಿನ ಬಜೆಟ್ ಅಧಿವೇಶನದ ಕೊನೆಯ ದಿನದವರೆಗೆ ಲೋಕಸಭೆ ಇತ್ತೀಚೆಗಷ್ಟೇ ವಿಸ್ತರಿಸಿದೆ.