ಮಹಾಕುಂಭ ನಗರ : 'ಮಹಾ ಕುಂಭಮೇಳ-2025'ಕ್ಕೆ ಭೇಟಿ ನೀಡುವ ಯಾತ್ರಿಕರ ನಿಖರ ಸಂಖ್ಯೆಯನ್ನು ತಿಳಿದುಕೊಳ್ಳಲು, ಉತ್ತರ ಪ್ರದೇಶ ಸರ್ಕಾರವು ಕೃತಕ ಬುದ್ಧಿಮತ್ತೆ (ಎ.ಐ) ಆಧಾರಿತ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಿದೆ.
'ಪ್ರಯಾಗರಾಜ್‌ನಲ್ಲಿ ನಡೆಯುವ ಕುಂಭಮೇಳ ಹಾಗೂ ಮಹಾ ಕುಂಭಕ್ಕೆ ಕೋಟ್ಯಂತರ ಯಾತ್ರಿಕರು ಭೇಟಿ ನೀಡುವುದು ವಾಡಿಕೆ.
ಆದರೆ ಸುಧಾರಿತ ತಂತ್ರಜ್ಞಾನದ ಕೊರತೆಯಿಂದಾಗಿ, ಮೇಳಕ್ಕೆ ಭೇಟಿ ನೀಡುವ ಯಾತ್ರಿಕರ ಸಂಖ್ಯೆಯನ್ನು ಲೆಕ್ಕ ಹಾಕುವುದು ಈವರೆಗೆ ಸವಾಲಾಗಿತ್ತು. ಹಾಗಾಗಿ, ಉತ್ತರ ಪ್ರದೇಶ ಸರ್ಕಾರವು ಈ ಬಾರಿ ಎ.ಐ ಆಧಾರಿತ ಸಿ.ಸಿ.ಟಿ.ವಿ ಕ್ಯಾಮೆರಾ ಅಳವಡಿಸಲು ಮುಂದಾಗಿದ್ದು, ಯಾತ್ರಿಕರ ಸಂಖ್ಯೆಯನ್ನು ನಿಖರವಾಗಿ ತಿಳಿಯಲು ಸಾಧ್ಯವಾಗಲಿದೆ' ಎಂದು ಪ್ರಕಟಣೆ ತಿಳಿಸಿದೆ.
ಬಹುತೇಕ ಯಾತ್ರಿಕರು ಮುಂಜಾನೆ 3ರಿಂದ ಬೆಳಿಗ್ಗೆ 7ರ ವರೆಗೆ ತೀರ್ಥಸ್ನಾನಕ್ಕೆ ತೆರಳುತ್ತಾರೆ. ಹೀಗಾಗಿ, ಎ.ಐ ಆಧಾರಿತ ಸಿ.ಸಿ.ಟಿ.ವಿ ಕ್ಯಾಮೆರಾಗಳು ಇದೇ ಸಮಯದಲ್ಲಿ ಭಕ್ತರ ಲೆಕ್ಕ ಹಾಕಲಿವೆ. ಪ್ರತಿ ನಿಮಿಷಕ್ಕೊಮ್ಮೆ ಪರಿಷ್ಕೃತ ಮಾಹಿತಿಯನ್ನು ಒದಗಿಸಲಿದ್ದು, ಶೇ 95ರಷ್ಟು ನಿಖರತೆ ಸಾಧಿಸುವ ನಿರೀಕ್ಷೆಯಿದೆ ಎಂದು ತಿಳಿಸಿದೆ.
ಪ್ರತಿ 12 ವರ್ಷಕ್ಕೊಮ್ಮೆ ನಡೆಯುವ ಮಹಾ ಕುಂಭಮೇಳವು, 'ಜಗತ್ತಿನಲ್ಲೇ ಅತಿ ಹೆಚ್ಚು ಯಾತ್ರಿಕರು ಭೇಟಿ ನೀಡುವ ಧಾರ್ಮಿಕ ಕಾರ್ಯಕ್ರಮ'ವೆಂಬ ಪ್ರತೀತಿ ಹೊಂದಿದೆ. ಈ ಬಾರಿ 2025ರ ಜನವರಿ 13 ರಿಂದ ಫೆಬ್ರುವರಿ 26ರ ವರೆಗೆ ಮೇಳ ನಿಗದಿಯಾಗಿದ್ದು, ಕೋಟ್ಯಂತರ ಯಾತ್ರಿಗಳು ಭೇಟಿ ನೀಡುವ ಸಾಧ್ಯತೆ ಇದೆ.
ಕುಂಭಮೇಳವನ್ನು ಯಶಸ್ವಿಯಾಗಿ ಆಯೋಜಿಸುವುದಕ್ಕಾಗಿಯೇ, ಉತ್ತರ ಪ್ರದೇಶ ಸರ್ಕಾರವು ನಾಲ್ಕು ತಾಲ್ಲೂಕುಗಳುಳ್ಳ 'ಮಹಾಕುಂಭ ನಗರ' ಜಿಲ್ಲೆಯನ್ನು ಈಚೆಗಷ್ಟೇ ರಚಿಸಿದೆ.
ಪ್ರಯಾಗರಾಜ್‌ನ 200 ಸ್ಥಳಗಳಲ್ಲಿ 744 ತಾತ್ಕಾಲಿಕ ಹಾಗೂ 268 ಕಡೆಗಳಲ್ಲಿ 1107 ಶಾಶ್ವತ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜೊತೆಗೆ 100ಕ್ಕೂ ಹೆಚ್ಚು ಪಾರ್ಕಿಂಗ್ ಜಾಗಗಳಲ್ಲಿ 720 ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲು ಉದ್ದೇಶಿಸಿದ್ದು ಸುಗಮ ಸಂಚಾರ ಹಾಗೂ ಜನದಟ್ಟಣೆ ನಿರ್ವಹಣೆಗೆ ಕ್ರಮ ಕೈಗೊಳ್ಳಲಾಗಿದೆ. ಮೇಳಕ್ಕೆ ಭೇಟಿ ನೀಡುವ ಯಾತ್ರಿಕರನ್ನು ಎಣಿಸಲು ಎ.ಐ ಆಧಾರಿತ ಸಿ.ಸಿ.ಟಿ.ವಿ ಕ್ಯಾಮೆರಾಗಳನ್ನು ಅಳವಡಿಸಲಾಗುವುದು ಎಂದು ಪ್ರಾದೇಶಿಕ ಆಯುಕ್ತ ವಿಜಯ್ ವಿಶ್ವಾಸ್ ಪಂತ್ ಮಾಹಿತಿ ನೀಡಿದ್ದಾರೆ.