ನವದೆಹಲಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಛತ್ತೀಸಗಢದ 'ನಕ್ಸಲ್ ಪೀಡಿತ' ಪ್ರದೇಶಗಳಿಗೆ ಶನಿವಾರದಿಂದ ಮೂರು ದಿನಗಳ ಪ್ರವಾಸ ಕೈಗೊಳ್ಳಲಿದ್ದಾರೆ.
ಶಾ ಅವರು ಪ್ರವಾಸದ ವೇಳೆ, ಛತ್ತೀಸಗಢದ ಕಾನೂನು ಮತ್ತು ಸುವ್ಯವಸ್ಥೆಯನ್ನು ಪರಿಶೀಲಿಸಲಿದ್ದಾರೆ. ಶರಣಾಗತರಾಗಿರುವ ನಕ್ಸಲರು ಹಾಗೂ ಸ್ಥಳೀಯರೊಂದಿಗೆ ಸಂವಾದ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಗೃಹ ಸಚಿವರು ರಾಯಪುರದಲ್ಲಿ ನಡೆಯಲಿರುವ ಭದ್ರತಾ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿಕೊಳ್ಳಲಿದ್ದಾರೆ. ಛತ್ತೀಸಗಢ ಪೊಲೀಸರಿಗೆ 'ರಾಷ್ಟ್ರಪತಿಯವರ ಕಲರ್ ಪ್ರಶಸ್ತಿ' ಪ್ರಧಾನ ಮಾಡಲಿದ್ದಾರೆ. ಬಳಿಕ ಜಗದಲಪುರಕ್ಕೆ ಪ್ರಯಾಣ ಬೆಳೆಸಲಿದ್ದು, ಶರಣಾಗತರಾಗಿರುವ ನಕ್ಸಲರು ಹಾಗೂ ಸ್ಥಳೀಯರೊಂದಿಗೆ ಮಾತುಕತೆ ನಡೆಸಲಿದ್ದಾರೆ ಎಂದು ಮೂಲಗಳು ಹೇಳಿವೆ.
'ಛತ್ತೀಸಗಢದ ಬಸ್ತರ್ ಹಾಗೂ ಕೊಂಡಾಗ್ರಾಮ ಜಿಲ್ಲೆಗಳಲ್ಲಿ ನಕ್ಸಲ್ ಚಟುವಟಿಕೆಗಳನ್ನು ಸಂಪೂರ್ಣವಾಗಿ ಹತ್ತಿಕ್ಕಲಾಗಿದೆ. ನಕ್ಸಲರ ತಾಣಗಳಾಗಿದ್ದ ಈ ಎರಡೂ ಜಿಲ್ಲೆಗಳು ಸದ್ಯ ನಕ್ಸಲ್ ಚಟುವಟಿಕೆಗಳಿಂದ ಸಂಪೂರ್ಣ ಮುಕ್ತವಾಗಿವೆ. ಉಳಿದೆಡೆಯೂ ನಕ್ಸಲರ ಹೆಡೆಮುರಿಕಟ್ಟಲು ಕಾರ್ಯಾಚರಣೆ ನಡೆಯುತ್ತಿದೆ' ಎಂದು ಛತ್ತೀಸಗಢ ಮುಖ್ಯಮಂತ್ರಿ ವಿಷ್ಣುದೇವ್ ಸಾಯಿ ಅವರು ಅಮಿತ್ ಶಾ ಅವರೊಂದಿಗೆ ಕಳೆದ ವಾರ ನಡೆದ ಸಭೆಯಲ್ಲಿ ತಿಳಿಸಿದ್ದರು. ಅದರ ಬೆನ್ನಲ್ಲೇ ಕೇಂದ್ರ ಗೃಹ ಸಚಿವರು ಈ ಪ್ರವಾಸ ಕೈಗೊಂಡಿದ್ದಾರೆ.