ಬೆಂಗಳೂರು: ಮಹತ್ವಾಕಾಂಕ್ಷೆಯ ಗಗನಯಾನ ಕಾರ್ಯಕ್ರಮದ ಮೊದಲ ಮಾನವ ರಹಿತ ಗಗನನೌಕೆಯ ಪರೀಕ್ಷೆಗೆ ಸಂಬಂಧಿಸಿ ಉಡ್ಡಯನ ವಾಹನದ (ಎಚ್‌ಎಲ್‌ವಿಎಂ3) ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ) ಬುಧವಾರ ಘೋಷಿಸಿದೆ.
ಈ ಕಾರ್ಯವು ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿ ನಡೆಯುತ್ತಿದೆ.
ಭಾರತದ ಮೊದಲ ಮಾನವ ಸಹಿತ ಗಗನಯಾನ ಹಾಗೂ ಭವಿಷ್ಯದ ಅಂತರಿಕ್ಷಯಾನಗಳಿಗೆ ಸಂಬಂಧಿಸಿ ಇದು ಮಹತ್ವದ ಹೆಜ್ಜೆಯಾಗಿದೆ ಎಂದು ಇಸ್ರೊ ಹೇಳಿದೆ.
ಗಗನಯಾನಿಗಳನ್ನು ಬಾಹ್ಯಾಕಾಶಕ್ಕೆ ಸುರಕ್ಷಿತವಾಗಿ ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿರುವ ಕಾರಣ, ಈ ಉಡ್ಡಯನ ವಾಹನವನ್ನು (ರಾಕೆಟ್) 'ಹ್ಯೂಮನ್ ರೇಟೆಡ್ ಲಾಂಚ್ ವೆಹಿಕಲ್ ಮಾರ್ಕ್-3' (ಎಚ್‌ಎಲ್‌ವಿಎಂ3) ಎಂದು ಕರೆಯಲಾಗುತ್ತದೆ.
'ಎಲ್‌ವಿಎಂ3' ರಾಕೆಟ್ ಅನ್ನು ಮೊದಲ ಬಾರಿಗೆ 2014ರ ಡಿ.18ರಂದು ಬಳಸಲಾಗಿತ್ತು. ಈ ರಾಕೆಟ್ ಕಾರ್ಯಾಚರಣೆಗೆ 10 ವರ್ಷ ಪೂರೈಸಿದ ದಿನದಂದೇ ಗಗನಯಾನಕ್ಕಾಗಿ 'ಎಚ್‌ಎಲ್‌ವಿಎಂ3' ನಿರ್ಮಾಣ ಕಾರ್ಯಕ್ಕೂ ಚಾಲನೆ ನೀಡಿರುವುದು ಗಮನಾರ್ಹ.
'ಗಗನಯಾನಿಗಳನ್ನು ಸುರಕ್ಷಿತವಾಗಿ ಹೊತ್ತೊಯ್ಯುವ 'ಎಲ್‌ವಿಎಂ3'ರ ಸಾಮರ್ಥ್ಯ ಪರೀಕ್ಷೆಯನ್ನು ಈಗಾಗಲೇ ಯಶಸ್ವಿಯಾಗಿ ನೆರವೇರಿಸಲಾಗಿದೆ. ಈ ಉಡ್ಡಯನ ವಾಹನದಲ್ಲಿ ಬಳಕೆಯಾಗುವ ಎಲ್ಲ ವ್ಯವಸ್ಥೆಗಳ ಕಾರ್ಯಕ್ಷಮತೆಯನ್ನು ಕೂಡ ಪರೀಕ್ಷಿಸಲಾಗಿದೆ' ಎಂದು ಇಸ್ರೊ ಪ್ರಕಟಣೆಯಲ್ಲಿ ತಿಳಿಸಿದೆ.
'ಗಗನಯಾನಿಗಳು ಭೂಮಿಗೆ ಮರಳುವ ವೇಳೆ, ಸುರಕ್ಷಿತವಾಗಿ ಪಾರಾಗುವ ವ್ಯವಸ್ಥೆಯನ್ನು (ಕ್ರೂ ಎಸ್ಕೇಪ್ ಸಿಸ್ಟಮ್) ಕೂಡ ಅಳವಡಿಸಲಾಗುತ್ತಿದೆ. ಇದು, ಮಾನವ ಸಹಿತ ಗಗನಯಾನ ಕಾರ್ಯಕ್ರಮ ಕುರಿತ ನಮ್ಮ ವಿಶ್ವಾಸ ಹೆಚ್ಚುವಂತೆ ಮಾಡಿದೆ' ಎಂದು ಇಸ್ರೊ ಹೇಳಿದೆ.
ಎಚ್‌ಎಲ್‌ವಿಎಂ3
ಮೂರು ಹಂತದ ಉಡ್ಡಯನ ವಾಹನ (ರಾಕೆಟ್)
10 ಟನ್‌ನಷ್ಟು ಭಾರದ ಗಗನನೌಕೆ/ಉಪಕರಣವನ್ನು ಕೆಳ ಭೂಕಕ್ಷೆಗೆ ಸೇರಿಸುವ ಸಾಮರ್ಥ್ಯ
ಈ ವಾಹನದ ಎತ್ತರ 53 ಮೀಟರ್ ಹಾಗೂ ತೂಕ 640 ಟನ್