ನವದೆಹಲಿ: ಇಂಡೋ-ಪೆಸಿಫಿಕ್ ವಲಯವನ್ನು ಸ್ವತಂತ್ರ ಹಾಗೂ ಮುಕ್ತಗೊಳಿಸಿ, ಶಾಂತಿಯುತ ಹಾಗೂ ಸೌಹಾರ್ದ ವಾತಾವರಣವನ್ನು ಕಾಪಾಡಲು ಬದ್ಧವಿರುವುದಾಗಿ 'ಕ್ವಾಡ್' ಸದಸ್ಯ ರಾಷ್ಟ್ರಗಳು ಮಂಗಳವಾರ ಪುನರುಚ್ಚರಿಸಿವೆ.
ಕ್ವಾಡ್ ಸಹಕಾರ ಸಂಘಟನೆಯ 20ನೇ ವಾರ್ಷಿಕೋತ್ಸವ ಅಂಗವಾಗಿ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ, 'ಕ್ವಾಡ್' ಸದಸ್ಯ ರಾಷ್ಟ್ರಗಳ ವಿದೇಶಾಂಗ ಸಚಿವರು ಈ ಬಗ್ಗೆ ಜಂಟಿ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಇಂಡೋ- ಪೆಸಿಫಿಕ್ ವಲಯದ ಭವಿಷ್ಯದ ಅಗತ್ಯಗಳಿಗೆ ಅನುಗುಣವಾಗಿ 'ಕ್ವಾಡ್'ನ ಎಲ್ಲ ಸದಸ್ಯ ರಾಷ್ಟ್ರಗಳು ಜೊತೆಯಾಗಿ ಕೆಲಸ ಮಾಡುವುದಾಗಿ ಹಾಗೂ ಈ ಪ್ರದೇಶದಲ್ಲಿ ಸ್ಥಿರತೆ ಮತ್ತು ಭದ್ರತೆಯನ್ನು ಖಾತ್ರಿಪಡಿಸುವುದಾಗಿಯೂ ಅವರು ಹೇಳಿದ್ದಾರೆ.
ಅಲ್ಲದೆ, ಆಸಿಯಾನ್ ಒಕ್ಕೂಟಕ್ಕೂ (ಆಗ್ನೇಯ ಏಷ್ಯಾ ರಾಷ್ಟ್ರಗಳ ಒಕ್ಕೂಟ) ಅಗತ್ಯ ಬೆಂಬಲ ನೀಡಲು ಬದ್ಧವಿರುವುದಾಗಿ ಒತ್ತಿ ಹೇಳಿದ್ದಾರೆ. 2004ರಲ್ಲಿ ಹಿಂದೂ ಮಹಾಸಾಗರದಲ್ಲಿ ಸುನಾಮಿ ಉಂಟಾಗಿದ್ದಾಗ, ನಾಲ್ಕೂ ರಾಷ್ಟ್ರಗಳು ಪರಸ್ಪರ ಸಹಕಾರದಿಂದ ಜಂಟಿಯಾಗಿ ಹೋರಾಡಿದ್ದನ್ನೂ ಇದೇ ವೇಳೆ ಸ್ಮರಿಸಿಕೊಂಡಿದ್ದಾರೆ.
ಇಂಡೋ- ಪೆಸಿಫಿಕ್ ವಲಯದಲ್ಲಿ ಚೀನಾದ ಪ್ರಭಾವ ಹೆಚ್ಚುತ್ತಿರುವ ಕಾರಣ, ಕ್ವಾಡ್ ರಾಷ್ಟ್ರಗಳು ಈ ಒಗ್ಗಟ್ಟು ಪ್ರದರ್ಶಿಸುತ್ತಿವೆ ಎಂದು ಹೇಳಲಾಗಿದೆ.