ಚಂಡೀಗಢ: ವಿವಿಧ ಬೇಡಿಕೆಗಳ ಈಡೇರಿಕೆಗಾಗಿ 101 ರೈತರ ಗುಂಪು ಪಂಜಾಬ್-ಹರಿಯಾಣದ ಶಂಭು ಗಡಿಯಿಂದ ದೆಹಲಿಯತ್ತ ಶನಿವಾರ ಪುನಃ ಪಾದಯಾತ್ರೆಯನ್ನು ಆರಂಭಿಸಿತ್ತು. ಆದರೆ ರೈತರು ಕೆಲವೇ ಮೀಟರ್ ದೂರ ಸಾಗಿದ ನಂತರ ಪೊಲೀಸರು ಬ್ಯಾರಿಕೇಡ್‌ಗಳನ್ನು ಹಾಕಿ ರೈತರನ್ನು ತಡೆದಿದ್ದಾರೆ.
ಬ್ಯಾರಿಕೇಡ್‌ಗಳತ್ತ ಧಾವಿಸುತ್ತಿದ್ದ ಪ್ರತಿಭಟನಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಶೆಲ್ ಮತ್ತು ಜಲಫಿರಂಗಿ ಪ್ರಯೋಗಿಸಿದ್ದಾರೆ.
ಘಟನೆಯಲ್ಲಿ ಹಲವು ರೈತರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗಳಿಗೆ ಕರೆದೊಯ್ಯಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಂಬಾಲಾ ಉಪ ಕಮಿಷನರ್ ಪಾರ್ಥ್ ಗುಪ್ತಾ ಮತ್ತು ಅಂಬಾಲಾ ಪೊಲೀಸ್ ವರಿಷ್ಠಾಧಿಕಾರಿ ಎಸ್.ಎಸ್. ಭೋರಿಯಾ ಅವರು ಪ್ರತಿಭಟನಾನಿರತ ರೈತರೊಂದಿಗೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಾತುಕತೆ ನಡೆಸಿದ್ದರು. ರಾಷ್ಟ್ರರಾಜಧಾನಿ ಆಡಳಿತದಿಂದ ಅನುಮತಿ ಪಡೆದ ನಂತರವಷ್ಟೇ ರೈತರು 'ದೆಹಲಿ ಚಲೋ' ನಡೆಸಬಹುದು ಎಂದು ಅಂಬಾಲಾ ಪೊಲೀಸರು ಇದಕ್ಕೂ ಮುನ್ನ ತಿಳಿಸಿದ್ದರು.
ರೈತರು ತಾವು ಬೆಳೆದ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ) ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆ ಒತ್ತಾಯಿಸಿ ಕೇಂದ್ರ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ.
ರಾಷ್ಟ್ರ ರಾಜಧಾನಿಯತ್ತ ಸಾಗುತ್ತಿದ್ದ ಪ್ರತಿಭಟನಾಕಾರರು ಡಿಸೆಂಬರ್ 6 ಮತ್ತು ಡಿಸೆಂಬರ್ 8ರಂದು ಪೊಲೀಸರು ತಡೆದಿದ್ದರು.