ಚಂಡೀಗಢ: ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಹುಡುಗಿಯನ್ನು ಒಂದು ಬಾರಿಯೂ ನೋಡದೆ ನೇರವಾಗಿ ಮದುವೆಯಾಗಲು ಜಲಂಧರ್‌ನಿಂದ ದಿಬ್ಬಣದ ಜತೆ ಬಂದಿದ್ದ ವರ, ವಧು ಸಿಗದೆ, ಮಂಟಪವೂ ಸಿಗದೆ ಕಾದು ಕಾದು ಮನೆಗೆ ವಾಪಸಾದ ಘಟನೆ ನಡೆದಿದೆ.
ದೀಪಕ್ ಕುಮಾರ್ ಮದುವೆಗೆ ಸಿದ್ಧವಾಗಿ ಬಂದಿದ್ದ ವರ. ಇವರು ದುಬೈನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಇನ್‌ಸ್ಟಾಗ್ರಾಂ ಮೂಲಕ ಪರಿಚಯವಾಗಿದ್ದ ಮನ್‌ಪ್ರೀತ್ ಕೌರ್ ಜೊತೆ ಕಳೆದ ಮೂರು ವರ್ಷಗಳಿಂದ ಮಾತನಾಡುತ್ತಿದ್ದರು. ನೇರವಾಗಿ ಒಬ್ಬರನ್ನೊಬ್ಬರು ಭೇಟಿ ಮಾಡಿರಲಿಲ್ಲ. ಈ ಮಧ್ಯೆ ಇಬ್ಬರ ಪೋಷಕರು ಫೋನ್ ಮೂಲಕ ಮಾತುಕತೆ ನಡೆಸಿ ಮದುವೆ ನಿಶ್ಚಯ ಮಾಡಿದ್ದರು. ಹೀಗಾಗಿ ದೀಪಕ್ ಒಂದು ತಿಂಗಳ ಹಿಂದೆ ದುಬೈನಿಂದ ಜಲಂಧರ್‌ಗೆ ಬಂದಿದ್ದರು.
ದೀಪಕ್ ಮತ್ತು ಅವರ ಕುಟುಂಬದ 150 ಮಂದಿ ಜಲಂಧರ್‌ನ ಮಂಡಯಾಲಿ ಗ್ರಾಮದಿಂದ ಪಂಜಾಬ್‌ನ ಮೋಗಾ ಜಿಲ್ಲೆಗೆ ದಿಬ್ಬಣದೊಂದಿಗೆ ಬಂದಿದ್ದರು. 'ಇಲ್ಲಿಗೆ ಬಂದಿಳಿದ ನಂತರ ನಮ್ಮ ಕಡೆಯವರು 'ರೋಸ್ ಗಾರ್ಡನ್ ಪ್ಯಾಲೆಸ್' ಕಲ್ಯಾಣ ಮಂಟಪಕ್ಕೆ ಕರೆದುಕೊಂಡು ಬರುತ್ತಾರೆ' ಎಂದು ವಧು ಕೌರ್ ತಿಳಿಸಿದ್ದರು. ಆದರೆ, ದೀಪಕ್ ಅವರು ಮೋಗಾಕ್ಕೆ ಬಂದಿಳಿದು ಸಂಜೆ 5 ಗಂಟೆವರೆಗೆ ಕಾದರೂ ವಧುವಿನ ಕಡೆಯವರು ಯಾರೂ ಬರಲಿಲ್ಲ. ಕಲ್ಯಾಣ ಮಂಟಪದ ಹೆಸರು ಹೇಳಿ ಸ್ಥಳೀಯರನ್ನು ವಿಚಾರಿಸಿದಾಗ ಮೋಗಾದಲ್ಲಿ ಈ ಹೆಸರಿನ ಯಾವುದೇ ಕಲ್ಯಾಣ ಮಂಟಪ ಇಲ್ಲ ಎಂದು ತಿಳಿಸಿದರು. ನಂತರ ದೀಪಕ್ ಪೊಲೀಸ್ ಠಾಣೆಯಲ್ಲಿ ಕೌರ್ ವಿರುದ್ಧ ದೂರು ನೀಡಿದ್ದಾರೆ ಪೊಲೀಸರು ತಿಳಿಸಿದ್ದಾರೆ.
ಕೌರ್‌ಗೆ ₹50,000 ಹಣವನ್ನು ನೀಡಿರುದಾಗಿ ದೀಪಕ್ ತಿಳಿಸಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
'ಪರಿವಾರದ 150 ಮಂದಿ ಜೊತೆಗೆ ಮದುವೆಗೆ ಬಂದಿದ್ದೇವೆ. ಅತಿಥಿಗಳಿಗೂ ಆಹ್ವಾನ ನೀಡಿದ್ದೆವು, ಅಡುಗೆಯವರು ಮತ್ತು ವಿಡಿಯೊಗ್ರಾಫರ್‌ಗಳಿಗೂ ಹೇಳಿದ್ದೆವು' ಎಂದು ದೀಪಕ್ ತಂದೆ ಪ್ರೇಮ್ ಚಂದ್ ಹೇಳಿದ್ದಾರೆ.
ವಧು ಅಥವಾ ಅವರ ಕುಟುಂಬಸ್ಥರು ಸಂಪರ್ಕಕ್ಕೆ ಸಿಗದ ನಂತರ ದೀಪಕ್ ಕುಮಾರ್ ದೂರು ದಾಖಲಿಸಿದ್ದು ತನಿಖೆ ನಡೆಯುತ್ತಿದೆ ಎಂದು ಮೋಗಾದ ಸಹಾಯಕ ಸಬ್ ಇನ್‌ಸ್ಪೆಕ್ಟರ್ ಹರ್ಜಿಂದರ್ ಸಿಂಗ್ ತಿಳಿಸಿದ್ದಾರೆ.