ತಿರುವನಂತಪುರ: ವಯನಾಡ್ ಭೂಕುಸಿತ ದುರಂತದ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲು ವೈತಿರಿ ತಾಲೂಕಿನಲ್ಲಿ ಎರಡು ಸ್ಥಳಗಳನ್ನು ಗುರುತಿಸಲಾಗಿದೆ. ಅಲ್ಲಿ ಸುಸ್ಥಿರ ಹಾಗೂ ವಿಪತ್ತು-ನಿರೋಧಕ ಟೌನ್‌ಶಿಪ್‌ಗಳು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಕರ್ನಾಟಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ದುರಂತದ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಾಣ ಮಾಡಿಕೊಡುವ ಸಂಬಂಧ ಕೇರಳ ಸರ್ಕಾರದಿಂದ ಯಾವುದೇ ಮಾಹಿತಿ ಬರದ ಬಗ್ಗೆ ಸಿದ್ದರಾಮಯ್ಯ ಅವರು ಪಿಣರಾಯಿಗೆ ಪತ್ರ ಬರೆದಿದ್ದರು. ಇದಕ್ಕೆ ಉತ್ತರಿಸಿರುವ ಕೇರಳ ಸಿಎಂ, ಈ ಉಲ್ಲೇಖ ಮಾಡಿದ್ದಾರೆ. ಅಲ್ಲದೇ ಕರ್ನಾಟಕ ಸರ್ಕಾರದ ಉಪಕಾರಕ್ಕೆ ಕೃತಜ್ಞತೆ ಅರ್ಪಿಸಿದ್ದಾರೆ.
ಡಿ.9ರಂದು ಪಿಣರಾಯಿಗೆ ಪತ್ರ ಬರೆದಿದ್ದ ಸಿದ್ದರಾಮಯ್ಯ, 100 ಮನೆ ನಿರ್ಮಾಣ ಸಂಬಂಧ ಭೂಮಿಯ ವೆಚ್ಚವನ್ನೂ ಭರಿಸಲು ಸಿದ್ಧ ಎಂದು ಹೇಳಿದ್ದರು.
ಕೇರಳ ಸರ್ಕಾರವು ವಯನಾಡ್ ವಿಪತ್ತು ಪೀಡಿತ ಕುಟುಂಬಗಳಿಗೆ ಸಹಾಯ ನೀಡಲು ಬಂದಿರುವ ಅನೇಕ ಪ್ರಸ್ತಾವನೆಗಳನ್ನು ಅನುಷ್ಠಾನಗೊಳಿಸಲು ವಿವರವಾದ ಪ್ರಾಯೋಜಕತ್ವ ರೂಪರೇಷೆಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ಇದೆ ಎಂದು ಪಿಣರಾಯಿ ಪತ್ರದಲ್ಲಿ ಹೇಳಿದ್ದಾರೆ.
'ಈ ರೂಪರೇಷೆಯು ಕರ್ನಾಟಕ ಸರ್ಕಾರ ಸಹಾಯ ಸೇರಿ ಎಲ್ಲವುಗಳನ್ನೂ ಒಳಗೊಂಡಿರಲಿದೆ. ಯೋಜನೆಯ ಪ್ರಗತಿ ಬಗ್ಗೆ ರಿಯಲ್ ಟೈಮ್ ಟ್ರ್ಯಾಕಿಂಗ್ ಮೂಲಕ ಪಡೆಯಬಹುದು' ಎಂದು ಉಲ್ಲೇಖಿಸಿದ್ದಾರೆ.
ಸಂತ್ರಸ್ತರು ಭವಿಷ್ಯದಲ್ಲಿ ಸಂಭವನೀಯ ವಿಪತ್ತುಗಳಿಂದ ಪಾರಾಗಲು ಸುರಕ್ಷಿತ ಸ್ಥಳಗಳಲ್ಲಿ ಪುನರ್ವಸತಿ ಕಲ್ಪಿಸಲು ಯೋಜನೆ ಇದೆ. ಹೊಸ ಸ್ಥಳಗಳು ಅವರ ಹಿಂದಿನ ಮನೆಗಳಿಗೆ ಹತ್ತಿರವಾಗಿರಬೇಕು ಎನ್ನುವುದೂ ಯೋಜನೆಯ ಭಾಗ ಎಂದು ಪತ್ರದಲ್ಲಿ ತಿಳಿಸಿದ್ದಾರೆ.