ಕೇಪ್ ಕೆನವೆರಾಲ್ : ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ಐಎಸ್‌ಎಸ್) ಸಿಲುಕಿರುವ ನಾಸಾದ ಗಗನಯಾನಿಗಳಾದ ಸುನಿತಾ ವಿಲಿಯಮ್ಸ್ ಹಾಗೂ ಬುಚ್ ವಿಲ್ಮೋರ್ ಭೂಮಿಗೆ ಮರಳುವುದು ಮತ್ತಷ್ಟು ವಿಳಂಬವಾಗಲಿದೆ.
'ಈ ಇಬ್ಬರು ಗಗನಯಾನಿಗಳು ಭೂಮಿಗೆ ಮರಳುವುದು ಇನ್ನಷ್ಟು ತಡವಾಗಲಿದೆ.
ಮಾರ್ಚ್ ಅಂತ್ಯಕ್ಕೆ ವಾಪಸಾಗಬಹುದು' ಎಂದು ನಾಸಾ ಮಂಗಳವಾರ ಘೋಷಿಸಿದೆ.
ಬೋಯಿಂಗ್ ಸಂಸ್ಥೆಯ ಸ್ಟಾರ್‌ಲೈನರ್ ಗಗನನೌಕೆಯಲ್ಲಿ ಸುನಿತಾ ಹಾಗೂ ವಿಲ್ಮೋರ್ ಅವರು ಜೂನ್ 5ರಂದು ಐಎಸ್‌ಎಸ್‌ನತ್ತ ಪ್ರಯಾಣ ಬೆಳೆಸಿದ್ದರು. ಗಗನನೌಕೆಯಲ್ಲಿ ಕಂಡುಬಂದ ತಾಂತ್ರಿಕ ದೋಷದಿಂದಾಗಿ ಭೂಮಿಗೆ ಮರಳಲು ಸಾಧ್ಯವಾಗದೇ, ಅವರು ಅಲ್ಲಿಯೇ ಸಿಲುಕಿದ್ದಾರೆ.
ಇಬ್ಬರು ಗಗನಯಾನಿಗಳನ್ನು ಹೊತ್ತ ಗಗನನೌಕೆಯನ್ನು ಐಎಸ್‌ಎಸ್‌ಗೆ ಕಳುಹಿಸುವುದು. ಹೊಸ ಗಗನಯಾನಿಗಳು ಐಎಸ್‌ಎಸ್‌ನಲ್ಲಿ ಇಳಿದ ನಂತರ, ಸುನಿತಾ ಮತ್ತು ವಿಲ್ಮೋರ್ ಅವರನ್ನು ಆದಷ್ಟು ತ್ವರಿತವಾಗಿ ಭೂಮಿಗೆ ಕರೆತರುವ ಪರ್ಯಾಯ ವ್ಯವಸ್ಥೆ ಕುರಿತು ನಾಸಾ ಸಿದ್ಧತೆ ನಡೆಸಿತ್ತು. ಈಗ, ಹೊಸ ಗಗನನೌಕೆಯ ಉಡ್ಡಯನ ವಿಳಂಬವಾಗಲಿದೆ. ಹೀಗಾಗಿ, ಈ ಮೊದಲು ನಿಗದಿ ಮಾಡಿದಂತೆ ಈ ಇಬ್ಬರು ಮಾರ್ಚ್ ಅಂತ್ಯಕ್ಕೆ ಅಥವಾ ಏಪ್ರಿಲ್ ವೇಳೆಗೆ ಭೂಮಿಗೆ ಮರಳುವ ಸಾಧ್ಯತೆ ಇದೆ.