HEALTH TIPS

ಧನಕರ್‌ ವಿರುದ್ಧ ಅವಿಶ್ವಾಸ ನಿರ್ಣಯ ನೋಟಿಸ್‌ ತಿರಸ್ಕೃತ

ನವದೆಹಲಿ: ರಾಜ್ಯಸಭೆಯ ಸಭಾಪತಿಯೂ ಆಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನಕರ್ ವಿರುದ್ಧ ಅವಿಶ್ವಾಸ ನಿಲುವಳಿ ಮಂಡಿಸಲು ವಿರೋಧಪಕ್ಷಗಳು ಸಲ್ಲಿಸಿರುವ ನೋಟಿಸ್‌ ಅನ್ನು ರಾಜ್ಯಸಭೆಯ ಉಪ ಸಭಾಪತಿ ಹರಿವಂಶ್ ಅವರು ಗುರುವಾರ ತಿರಸ್ಕರಿಸಿದ್ದಾರೆ.

ವಿಪಕ್ಷಗಳು ಸಲ್ಲಿಸಿರುವ ನೋಟಿಸ್, 'ಸಾಂವಿಧಾನಿಕ ಸಂಸ್ಥೆಗೆ ಕೇಡು ಬಗೆಯುವ ಮತ್ತು ಉಪರಾಷ್ಟ್ರಪತಿಗೆ ಮಾನಹಾನಿ ಮಾಡುವ ಷಡ್ಯಂತ್ರದ ಭಾಗವಾಗಿದೆ' ಎಂದು ಉಪಸಭಾಪತಿ ಹೇಳಿರುವುದಾಗಿ ಮೂಲಗಳು ತಿಳಿಸಿವೆ.

ಉಪ ಸಭಾಪತಿಯ ನಿರ್ಧಾರವನ್ನು ರಾಜ್ಯಸಭೆಯ ಪ್ರಧಾನ ಕಾರ್ಯದರ್ಶಿ ಪಿ.ಸಿ ಮೋದಿ ಅವರು ಸದನದಲ್ಲಿ ಗುರುವಾರ ಮಂಡಿಸಿದರು.

'ಸಭಾಪತಿ ಅವರನ್ನು ವೈಯಕ್ತಿಕವಾಗಿ ಗುರಿಯಾಗಿಸಿದ ನೋಟಿಸ್‌, ವಾಸ್ತವಾಂಶಗಳನ್ನು ಒಳಗೊಂಡಿಲ್ಲ ಹಾಗೂ ಪ್ರಚಾರ ಪಡೆಯುವ ಉದ್ದೇಶವನ್ನು ಹೊಂದಿದೆ. ಉಪರಾಷ್ಟ್ರಪತಿಯಂತಹ ಉನ್ನತ ಸಾಂವಿಧಾನಿಕ ಹುದ್ದೆಯ ಗೌರವಕ್ಕೆ ಉದ್ದೇಶಪೂರ್ವಕವಾಗಿ ಧಕ್ಕೆ ಉಂಟುಮಾಡುವ ವಿಪಕ್ಷಗಳ ಸಮಯಸಾಧಕತನವನ್ನು ಇದು ಬಹಿರಂಗಪಡಿಸಿದೆ' ಎಂದು ಹರಿವಂಶ್ ಹೇಳಿದ್ದಾರೆ.

'ಹಲವು ದೋಷಗಳಿಂದ ಕೂಡಿರುವ ಅನುಚಿತ ನೋಟಿಸ್‌ ಇದಾಗಿದ್ದು, ತರಾತುರಿಯಲ್ಲಿ ಸಲ್ಲಿಸಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಆದ್ದರಿಂದ ನೋಟಿಸ್‌ ಅನ್ನು ವಜಾಗೊಳಿಸಲಾಗಿದೆ' ಎಂದು ತಮ್ಮ ನಿರ್ಧಾರದಲ್ಲಿ ತಿಳಿಸಿದ್ದಾರೆ.

2021ರ ಅಕ್ಟೋಬರ್‌ನಲ್ಲಿ ಅಂದಿನ ಸಭಾಪತಿ ಎಂ.ವೆಂಕಯ್ಯ ನಾಯ್ಡು ಅವರು ತಮ್ಮದೇ ವಿರುದ್ಧದ ಅವಿಶ್ವಾಸ ನಿರ್ಣಯದ ನೋಟಿಸ್‌ ತಿರಸ್ಕರಿಸಿರುವುದನ್ನು ಉಲ್ಲೇಖಿಸಿರುವ ಹರಿವಂಶ್, 'ಅವಿಶ್ವಾಸ ನಿಲುವಳಿಯನ್ನು ಈ ಅಧಿವೇಶನದಲ್ಲಿ ಮಂಡಿಸಲು ಸಾಧ್ಯವಿಲ್ಲ ಎಂಬುದು ನೋಟಿಸ್‌ಗೆ ಸಹಿ ಮಾಡಿದವರಿಗೆ ತಿಳಿದಿದೆ. ಧನಕರ್‌ ವಿರುದ್ಧ ಕೇವಲ ಸಂಕಥನವೊಂದನ್ನು ಸೃಷ್ಟಿಸುವುದು ಇದರ ಹಿಂದಿನ ಉದ್ದೇಶವಾಗಿದೆ' ಎಂದಿದ್ದಾರೆ.

ಸದನವನ್ನು ‍ಪಕ್ಷಪಾತಿಯಾಗಿ ನಡೆಸುತ್ತಿರುವ ಆರೋಪದ ಅಡಿಯಲ್ಲಿ ಧನಕರ್ ಅವರನ್ನು ಪದಚ್ಯುತಗೊಳಿಸುವ ಗೊತ್ತುವಳಿ ಮಂಡಿಸಲು ವಿರೋಧ ಪಕ್ಷಗಳು ಡಿಸೆಂಬರ್‌ 10ರಂದು ನೋಟಿಸ್‌ ನೀಡಿದ್ದವು. ಕಾಂಗ್ರೆಸ್, ಆರ್‌ಜೆಡಿ, ಟಿಎಂಸಿ, ಸಿಪಿಐ, ಸಿಪಿಎಂ, ಜೆಎಂಎಂ, ಎಎಪಿ, ಡಿಎಂಕೆ ಪಕ್ಷದ ಅಂದಾಜು 60 ಸದಸ್ಯರು ನೋಟಿಸ್‌ಗೆ ಸಹಿ ಮಾಡಿದ್ದರು.

ವಜಾಗೊಳಿಸಲು ನೀಡಿದ ಇತರ ಕಾರಣಗಳು..

* ನೋಟಿಸ್ ಕಪೋಲಕಲ್ಪಿತ ಅಂಶಗಳನ್ನು ಒಳಗೊಂಡಿದೆ

* ನಿರ್ಲಕ್ಷ್ಯದಿಂದ ಸಲ್ಲಿಸಲಾಗಿದೆ ಎಂಬುದು ಕಂಡುಬರುತ್ತದೆ

* ವಿಳಾಸದಾರರ ಹೆಸರು ನಮೂದಿಸಿಲ್ಲ

* ಅವಿಶ್ವಾಸ ನಿರ್ಣಯದ ಸಂಪೂರ್ಣ ಸಾರಾಂಶ ಒಳಗೊಂಡಿಲ್ಲ

* ಧನಕರ್‌ ಅವರ ಹೆಸರನ್ನೂ (ಸ್ಪೆಲ್ಲಿಂಗ್) ಸರಿಯಾಗಿ ಬರೆದಿಲ್ಲ

* ಆರೋಪಗಳಿಗೆ ಸಂಬಂಧಿಸಿದ ದಾಖಲೆಗಳು ಮತ್ತು ವಿಡಿಯೊಗಳನ್ನು ಒಳಗೊಂಡಿಲ್ಲ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries