ನವದೆಹಲಿ: ಪರಿಸರ ಶಿಕ್ಷಣಕ್ಕೆ ಸಂಬಂಧಿಸಿ ಅಗ್ರಸ್ಥಾನದಲ್ಲಿರುವ ವಿಶ್ವದ 50 ಶಿಕ್ಷಣಸಂಸ್ಥೆಗಳಲ್ಲಿ ಬೆಂಗಳೂರಿನಲ್ಲಿರುವ ಭಾರತೀಯ ವಿಜ್ಞಾನ ಸಂಸ್ಥೆಯು (ಐಐಎಸ್‌ಸಿ) ಒಂದಾಗಿದೆ ಎಂದು ಕ್ಸೂಎಸ್ ಶ್ರೇಯಾಂಕ ಪಟ್ಟಿ ಮಂಗಳವಾರ ತಿಳಿಸಿದೆ.
ದೆಹಲಿಯ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯು ಸುಸ್ಥಿರತೆಗೆ ಸಂಬಂಧಿಸಿ ದೇಶದಲ್ಲಿ ಅಗ್ರಸ್ಥಾನದಲ್ಲಿದ್ದು, ಜಾಗತಿಕ ಮಟ್ಟದ 255 ಸಂಸ್ಥೆಗಳ ಪಟ್ಟಿಯಲ್ಲಿ 171ನೇ ಸ್ಥಾನವನ್ನು ಪಡೆದುಕೊಂಡಿದೆ.
2025ರ ಕ್ಯೂಎಸ್ ಶ್ರೇಯಾಂಕ ಪಟ್ಟಿಯಲ್ಲಿ ಭಾರತದ 78 ವಿಶ್ವವಿದ್ಯಾಲಯಗಳು ಸ್ಥಾನ ಗಳಿಸಿವೆ. ಅದರಲ್ಲಿ 10 ವಿ.ವಿಗಳು ಹಿಂದಿನ ವರ್ಷಗಳಿಗಿಂದ ಸುಧಾರಣೆ ಕಂಡಿದ್ದು, 21 ಸಂಸ್ಥೆಗಳು ಹೊಸದಾಗಿ ಸೇರ್ಪಡೆಗೊಂಡಿವೆ.
ಪರಿಸರ ಸಂಬಂಧಿತ ವಿಚಾರದಲ್ಲಿ ದೆಹಲಿ ಮತ್ತು ಕಾನ್ಪುರ ಐಐಟಿಗಳು ವಿಶ್ವದ ಅಗ್ರ 100 ಶಿಕ್ಷಣಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿವೆ.
'ಭಾರತೀಯ ಉನ್ನತ ಶಿಕ್ಷಣ ವಲಯವು ಉತ್ತಮ ಸಾಧನೆ ಮಾಡಿದೆ. ಭಾರತದ ವಿ.ವಿಗಳು ಸುಸ್ಥಿರ ಪರಿಸರದ ಗುರಿಯೊಂದಿಗೆ ಮುನ್ನುಗ್ಗುತ್ತಿವೆ' ಎಂದು ಲಂಡನ್ ಮೂಲದ ಕ್ಯೂಎಸ್ ಸಂಸ್ಥೆಯ ಉಪಾಧ್ಯಕ್ಷ ಬೆನ್ ಸೌಟರ್ ಅವರು ತಿಳಿಸಿದ್ದಾರೆ.