ನವದೆಹಲಿ: ಆದಷ್ಟು ಬೇಗ ಹಿಂಸಾಚಾರ ಪೀಡಿತ ಮಣಿಪುರಕ್ಕೆ ಭೇಟಿ ನೀಡುವಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಇಂಡಿಯಾ ಮೈತ್ರಿಕೂಟದ ಪಕ್ಷಗಳ ಮಣಿಪುರದ ಘಟಕದ ವತಿಯಿಂದ ಆಗ್ರಹಿಸಲಾಗಿದೆ.
ಇಂಡಿಯಾ ಮೈತ್ರಿ ಕೂಟದ 10 ಪಕ್ಷಗಳ ನಾಯಕರ ನಿಯೋಗವು ದೆಹಲಿಯಲ್ಲಿ ಇಂದು (ಶುಕ್ರವಾರ) ಪತ್ರಿಕಾಗೋಷ್ಠಿ ನಡೆಸಿವೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮಣಿಪುರ ಕಾಂಗ್ರೆಸ್ ಮುಖ್ಯಸ್ಥ ಕೆ. ಮೇಘಚಂದ್ರ ಅವರು, 'ಸುಮಾರು 10 ರಾಜಕೀಯ ಪಕ್ಷಗಳು ಸೇರಿ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದ್ದೆವು. ಆದರೆ ಅಧಿಕಾರಿಗಳು ನಮಗೆ ಅನುಮತಿ ನೀಡಿಲ್ಲ. ನಮ್ಮ ಪ್ರತಿಭಟನೆಯ ಹಕ್ಕನ್ನು ನಿರಾಕರಿಸಿರುವುದು ದೃಷ್ಟಕರವಾಗಿದೆ. ಆದರೆ, ನಮ್ಮ ಪ್ರತಿಭಟನೆಯು ಬೇರೆ ರೂಪದಲ್ಲಿ ಮುಂದುವರಿಯುತ್ತದೆ. ತಮ್ಮ ಬೇಡಿಕೆಗಳ ಕುರಿತು ಪ್ರಧಾನಿ ಮೋದಿ ಅವರಿಗೆ ಮನವಿ ಪತ್ರ ಸಲ್ಲಿಸಿದ್ದೇವೆ' ಎಂದು ಹೇಳಿದ್ದಾರೆ.
'ಮಣಿಪುರ ಕೂಡ ಭಾರತದ ಭಾಗ. ಆದರೂ ಕಳೆದ 18 ತಿಂಗಳಿನಿಂದ ಕೇಂದ್ರ ಸರ್ಕಾರ ಏಕೆ ಇಷ್ಟೊಂದು ನಿರ್ಲಕ್ಷ್ಯ ಧೋರಣೆ ತಾಳಿದೆ. ಹಿಂಸಾಚಾರದಲ್ಲಿ ನೂರಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. 60 ಸಾವಿರಕ್ಕೂ ಹೆಚ್ಚು ಜನ ನಿರಾಶ್ರಿತರ ಶಿಬಿರಗಳಲ್ಲಿದ್ದಾರೆ. ಇನ್ನು ಎಷ್ಟು ದಿನ ಅವರು ನರಳಬೇಕು' ಎಂದು ಮೇಘಚಂದ್ರ ಪ್ರಶ್ನಿಸಿದ್ದಾರೆ.
ಪ್ರಧಾನ ಮಂತ್ರಿ ಮತ್ತು ಕೇಂದ್ರ ಸರ್ಕಾರದ ನಿರ್ಲಕ್ಷ್ಯಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ. ಏಕೆಂದರೆ ಮಣಿಪುರದ ಪ್ರಸ್ತುತ ಬಿಕ್ಕಟ್ಟಿನ ಬಗ್ಗೆ ಪ್ರಧಾನಿ ಮಾತನಾಡಿಲ್ಲ. ರಾಜ್ಯಕ್ಕೆ ಭೇಟಿ ನೀಡಿಲ್ಲ. ಚರ್ಚೆಗೆ ಪ್ರತಿನಿಧಿಗಳನ್ನು ಆಹ್ವಾನಿಸಿಲ್ಲ ಎಂದೂ ಅವರು ದೂರಿದ್ದಾರೆ.
ಮನವಿ ಪತ್ರದಲ್ಲಿ ಏನಿದೆ?
ಮಣಿಪುರದ ಜನತೆ ಹಾಗೂ ಇಂಡಿಯಾ ಮೈತ್ರಿ ಕೂಟದ ಪಕ್ಷಗಳ ಪರವಾಗಿ, ರಾಜ್ಯಕ್ಕೆ (ಮಣಿಪುರ) ಭೇಟಿ ನೀಡುವಂತೆ ನಿಮ್ಮನ್ನು(ಪ್ರಧಾನಿ) ಆಹ್ವಾನಿಸುತ್ತೇವೆ. ಸುಮಾರು 2 ವರ್ಷಗಳಿಂದ ರಾಜ್ಯ ಪ್ರಕ್ಷುಬ್ಧವಾಗಿದೆ. ಇದರಿಂದ ಸುಮಾರು ಒಂದು ಲಕ್ಷ ಜನ ಸ್ಥಳಾಂತರಗೊಂಡಿದ್ದಾರೆ. ನೂರಾರು ಜನ ಪ್ರಾಣ ಕಳೆದುಕೊಂಡಿದ್ದಾರೆ. ಸಾವಿರಾರು ಮನೆಗಳು ಸುಟ್ಟು ಕರಕಲಾಗಿವೆ. 2024ರ ಈ ವರ್ಷ ಮುಗಿಯುವ ಮೊದಲು ಮಣಿಪುರಕ್ಕೆ ಭೇಟಿ ನೀಡಿ. ನಿಮಗೆ ಸಮಯವಿಲ್ಲದಿದ್ದರೆ, ಮಣಿಪುರದ ಎಲ್ಲಾ ರಾಜಕೀಯ ಪಕ್ಷಗಳನ್ನು ನಿಮ್ಮ ಕಚೇರಿ ಅಥವಾ ನವದೆಹಲಿಯಲ್ಲಿರುವ ನಿಮ್ಮ ಅಧಿಕೃತ ನಿವಾಸಕ್ಕೆ ಆಹ್ವಾನಿಸಿ. ಪ್ರಧಾನ ಮಂತ್ರಿಯಾಗಿ, ರಾಜ್ಯದ ಜನರೊಂದಿಗೆ ನಿಮ್ಮ ನೇರ ಪಾಲ್ಗೊಳ್ಳುವಿಕೆ ಇಲ್ಲಿ ಶಾಂತಿ ಮತ್ತು ಸಹಜತೆಯನ್ನು ತರಬಲ್ಲದು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಕಳೆದ ವರ್ಷ ಮೇ ತಿಂಗಳಿನಿಂದ ಇಂಫಾಲ ಕಣಿವೆಯಲ್ಲಿ ಮೈತೇಯಿ ಹಾಗೂ ಕುಕಿ ಸಮುದಾಯಗಳ ನಡುವಿನ ಜನಾಂಗೀಯ ಹಿಂಸಾಚಾರದಲ್ಲಿ 220ಕ್ಕೂ ಹೆಚ್ಚು ಜನ ಮೃತಪಟ್ಟಿದ್ದಾರೆ.