ತಿರುವನಂತಪುರಂ: ಪತ್ರಕರ್ತ ಕೆ.ಎಂ.ಬಶೀರ್ ಹತ್ಯೆ ಪ್ರಕರಣದಲ್ಲಿ ಆರೋಪಿ ಐಎಎಸ್ ಅಧಿಕಾರಿ ಶ್ರೀರಾಮ ವೆಂಕಟರಾಮನ್ ಅವರು ಪ್ರಕರಣವನ್ನು ಮುಂದೂಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿರುವರು.
ಅಧಿಕಾರಿ ಶ್ರೀರಾಮ್ ವೆಂಕಟರಾಮನ್ ಅವರು ಪ್ರಕರಣ ವಿಚಾರಣೆ ಮುಂದೂಡುವಂತೆ ಆಗ್ರಹಿಸಿದ್ದಾರೆ. ಶ್ರೀರಾಮ್ ಪರ ವಕೀಲ ಬಿ.ರಾಮನ್ ಪಿಳ್ಳೆ ಅವರು ನ್ಯಾಯಾಲಯದ ಮೊದಲ ಮಹಡಿಯ ಮೆಟ್ಟಿಲು ಹತ್ತುವುದು ಕಷ್ಟಕರವಾಗುತ್ತಿದೆ ಎಂದು ಕಾರಣ ನೀಡಿರುವರು. ಕೆಳ ಮಹಡಿ ನ್ಯಾಯಾಲಯಕ್ಕೆ ವರ್ಗಾಯಿಸಬೇಕು ಎಂಬುದು ಆಗ್ರಹ.
ಸೋಮವಾರ ವಿಚಾರಣೆ ಆರಂಭವಾಗಬೇಕಿತ್ತು. 1ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್ ನ್ಯಾಯಾಲಯವು ಸಾಕ್ಷಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗುವಂತೆ ಸಮನ್ಸ್ ಜಾರಿ ಮಾಡಿತ್ತು. ಈ ಮಧ್ಯೆ, ಆದೇಶವನ್ನು ಬದಲಾಯಿಸಲು ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲಾಯಿತು. ಇದರ ಬೆನ್ನಲ್ಲೇ ನ್ಯಾಯಾಲಯ ವಿಚಾರಣೆಯನ್ನು ಮುಂದೂಡಿದೆ. 19ರಂದು ಮತ್ತೆ ಪ್ರಕರಣದ ವಿಚಾರಣೆ ನಡೆಯಲಿದೆ.