ಶಬರಿಮಲೆಯ ಸೀಸನ್ ಆರಂಭವಾಗಿದೆ. ಈ ಸಮಯದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡಿ ಅಯ್ಯಪ್ಪನ ದರ್ಶನ ಪಡೆಯುತ್ತಾರೆ. ಹೀಗೆ ದೇವಸ್ಥಾನಕ್ಕೆ ತೆರಳುವ ಭಕ್ತರಿಗೆ ಸಹಾಯವಾಗಲೆಂದು ಕೇರಳ ಸರ್ಕಾರ ಸ್ವಾಮಿ ಚಾಟ್‌ಬಾಟ್ ಅನ್ನು ಜಾರಿಗೆ ತಂದಿದೆ. ಈ ಯೋಜನೆ ಸದ್ಯ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಹೌದು.. ಕಳೆದ ವರ್ಷ ಶಬರಿಮಲೆಗೆ ತೆರಳುವ ಭಕ್ತರು ಸಾಕಷ್ಟು ತೊಂದರೆಗಳನ್ನು ಅನುಭವಿಸಿದ್ದರು. ಇದನ್ನು ತಪ್ಪಿಸಲು ಕೇರಳ ಸರ್ಕಾರ ಈ ಬಾರಿ ಚಾಟ್‌ಬಾಟ್ ಅನ್ನು ಜಾರಿಗೆ ತಂದಿದೆ. ದೇವಸ್ಥಾನಕ್ಕೆ ತೆರಳುವ ಭಕ್ತರು ಇದರಲ್ಲಿ ತಮ್ಮ ಸಮಸ್ಯೆಗೆ ಪರಿಹಾರವನ್ನು ಪಡೆಯಬಹುದು. ನವೆಂಬರ್ 15 ರಂದು ಸಕ್ರಿಯಗೊಂಡ ಸ್ವಾಮಿ ಚಾಟ್‌ಬಾಟ್ ಅನ್ನು ಭಕ್ತರು ಈಗಾಗಲೇ ಬಳಕೆ ಮಾಡುತ್ತಿದ್ದಾರೆ.
ಕೇರಳದ ಪಥನಂತಿಟ್ಟಾ ಜಿಲ್ಲಾಡಳಿತ ಆರಂಭಿಸಿರುವ ಸ್ವಾಮಿ ಚಾಟ್‌ಬಾಟ್‌ಗೆ ಶಬರಿಮಲೆ ದೇವಸ್ಥಾನಕ್ಕೆ ಭೇಟಿ ನೀಡುವ ಯಾತ್ರಾರ್ಥಿಗಳಿಂದ ಅಪಾರ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಚಾಟ್‌ಬಾಟ್ ಸಾವಿರಾರು ಭಕ್ತರಿಗೆ ಪ್ರಮುಖ ಮಾಹಿತಿ ಮತ್ತು ಸಹಾಯದೊಂದಿಗೆ ತೀರ್ಥಯಾತ್ರೆಯ ಅನುಭವವನ್ನು ಉತ್ತಮಗೊಳಿಸುವ ಗುರಿಯನ್ನು ಹೊಂದಿದೆ. ಜಿಲ್ಲಾಧಿಕಾರಿ ಪ್ರೇಮ್ ಕೃಷ್ಣ ಅವರು ಕೈಗೊಂಡಿರುವ ಚಾಟ್‌ಬಾಟ್ ಯೋಜನೆ ಯಾತ್ರಾರ್ಥಿಗಳ ಸಮಸ್ಯೆಗಳನ್ನು ಪರಿಹರಿಸಲು ಮತ್ತು ತೀರ್ಥಯಾತ್ರೆ ಪ್ರಕ್ರಿಯೆಯನ್ನು ಸರಳಗೊಳಿಸುವ ಉದ್ದೇಶವನ್ನು ಹೊಂದಿದೆ. ಪ್ರಾರಂಭವಾದ ಕೇವಲ 10 ದಿನಗಳಲ್ಲಿ ಚಾಟ್‌ಬಾಟ್ 75,000 ಬಳಕೆದಾರರನ್ನು ತಲುಪಿದೆ. ಸ್ವಾಮಿ ಚಾಟ್‌ಬಾಟ್ ಪ್ರತಿದಿನ ಸರಾಸರಿ 5,000 ರಿಂದ 10,000 ವಿನಂತಿಗಳನ್ನು ನಿರ್ವಹಿಸುತ್ತದೆ. ಹೆಚ್ಚಿನ ಸಂಖ್ಯೆಯ ಯಾತ್ರಿಕರ ಅಗತ್ಯಗಳನ್ನು ಪರಿಹರಿಸುವಲ್ಲಿ ಕಾರ್ಯ ನಿರ್ವಹಿಸುತ್ತದೆ ಎಂದು ಜಿಲ್ಲಾಡಳಿತ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ. ಅಲ್ಲದೆ ಚಾಟ್‌ಬಾಟ್ ಯಾತ್ರಾರ್ಥಿಗಳಿಗೆ ಆಹಾರ ಚಾರ್ಟ್ ಸೇರಿದಂತೆ ವಿವಿಧ ರಂಗಗಳಲ್ಲಿ ಬೇಕಾದ ಮಾಹಿತಿ ನೀಡಿ ಭಕ್ತರಿಗೆ ಸಹಾಯವನ್ನು ಮಾಡುತ್ತದೆ. ಅಲ್ಲದೆ ಇದು ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ (KSRTC) ಬಸ್ ವೇಳಾಪಟ್ಟಿಗಳ ಬಗ್ಗೆ ಮಾಹಿತಿ ಜೊತೆಗೆ ದೇವಾಲಯದ ಮುಚ್ಚುವ ಮತ್ತು ತೆರೆಯುವ ಸಮಯದ ಬಗ್ಗೆ ತಿಳಿಸುತ್ತದೆ.
ವಿಶೇಷವಾಗಿ ಚಾಟ್‌ಬಾಟ್ ತುರ್ತು ಸಹಾಯದಲ್ಲಿ ಪ್ರಮುಖ ಪಾತ್ರವನ್ನು ವಹಿಸಿಸುತ್ತದೆ. ಹೇಗೆಂದರೆ ವೈದ್ಯಕೀಯ ತುರ್ತುಸ್ಥಿತಿಗಳು ಮತ್ತು ಕಾಣೆಯಾದ ವ್ಯಕ್ತಿಗಳನ್ನು ಅವರ ಕುಟುಂಬಗಳೊಂದಿಗೆ ಮತ್ತೆ ಸೇರಿಸುವಲ್ಲಿ, ಯಾತ್ರಾರ್ಥಿಗಳ ಸುರಕ್ಷತೆ ಮತ್ತು ಯೋಗಕ್ಷೇಮವನ್ನು ಖಾತ್ರಿಪಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ. ಇದುವರೆಗೆ ಇದು 1,768 ತುರ್ತು ಪ್ರಕರಣಗಳನ್ನು ನಿರ್ವಹಿಸಿದೆ ಎಂದು ಜಿಲ್ಲಾಡಳಿತ ಮಾಹಿತಿ ಹಂಚಿಕೊಂಡಿದೆ. ಹೀಗಾಗಿ ಚಾಟ್‌ಬಾಟ್‌ನನ್ನು ಇನ್ನಷ್ಟು ಸುಧಾರಣೆ ಮಾಡಲು ಜಿಲ್ಲಾಡಳಿತ ಮುಂದಾಗಿದ್ದು ಮುಂಬರುವ ವಾರದಲ್ಲಿ ಇನ್ನಷ್ಟು ಅಪ್‌ಡೇಟ್ ಮಾಡಲಾಗುವುದು ಎಂದು ಪತ್ತನಂತಿಟ್ಟ ಜಿಲ್ಲಾಡಳಿತ ತಿಳಿಸಿದೆ. ಇದರಿಂದ ಚಾಟ್‌ಬಾಟ್ ನಲ್ಲಿ ಹವಾಮಾನದ ಬಗ್ಗೆ ಕೂಡ ಅಪ್‌ಡೇಟ್ ಸಿಗಲಿದೆ. ಇದು ಭಕ್ತರಿಗೆ ನೈಜ-ಸಮಯದ ಹವಾಮಾನ ಮಾಹಿತಿ ನೀಡಲು ಸಹಾಯ ಮಾಡುತ್ತದೆ. ಇದರಿಂದ ದೇವಸ್ಥಾನ ಭೇಟಿಗೆ ಭಕ್ತರಿಗೆ ಅನುಕೂಲವಾಗಲಿದೆ. ಭಕ್ತರು 6238008000 ಗೆ "ಹಾಯ್" ಎಂದು ಕಳುಹಿಸುವ ಮೂಲಕ ಚಾಟ್‌ಬಾಟ್ ಅನ್ನು ಸಕ್ರಿಯಗೊಳಿಸಬಹುದು. ಶಬರಿಮಲೆ ಯಾತ್ರೆಯು ಯಾತ್ರಾರ್ಥಿಗಳಿಗೆ ಸುರಕ್ಷಿತ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುವುದನ್ನು ಖಚಿತಪಡಿಸಿಕೊಳ್ಳಲು ತಂತ್ರಜ್ಞಾನದ ಬಳಕೆಯನ್ನು ಮಾಡಲು ಸ್ವಾಮಿ ಚಾಟ್‌ಬಾಟ್ ಉಪಯುಕ್ತವಾಗಿದೆ.
ಹತ್ತಾರು ಭಕ್ತರು ಏಕಕಾಲದಲ್ಲಿ ಜಮಾಯಿಸುವುದರಿಂದ ಯಾವುದೇ ಅನಿರೀಕ್ಷಿತ ಅವಘಡಗಳು ಸಂಭವಿಸಿದಲ್ಲಿ ಅಥವಾ ಯಾವುದೇ ತುರ್ತು ಸಹಾಯದ ಅಗತ್ಯವಿದ್ದರೆ, "ಸ್ವಾಮಿ ಚಾಟ್‌ಬಾಟ್" ಎಂಬ ಪ್ರವಾಸಿ ಮಾರ್ಗದರ್ಶಿಯನ್ನು ಮೊಬೈಲ್ ಸಂಖ್ಯೆ 6238008000 ಗೆ ಸಂದೇಶ ಕಳುಹಿಸುವ ಮೂಲಕ ತಲುಪಬಹುದು. ಅಂದರೆ ಪೊಲೀಸ್, ಅಗ್ನಿಶಾಮಕ ಸೇವೆಗಳು, ವೈದ್ಯಾಧಿಕಾರಿಗಳು, ಅರಣ್ಯ ಅಧಿಕಾರಿಗಳು ಮತ್ತು ಆಹಾರ ಭದ್ರತೆಗಾಗಿ ತುರ್ತು ದೂರವಾಣಿ ಸಂಖ್ಯೆಗಳನ್ನು ಸಹ ಪ್ರವೇಶಿಸಬಹುದು. ಇದು ಜನದಟ್ಟಣೆಯ ಸಮಯದಲ್ಲಿ ಭಕ್ತರಿಗೆ ತ್ವರಿತ ಸೇವೆಗಳನ್ನು ಒದಗಿಸುತ್ತದೆ. ಈ "ಸ್ವಾಮಿ ಚಾಟ್‌ಬಾಟ್" ಮೂಲಕ ಶಬರಿಮಲೆಗೆ ಭೇಟಿ ನೀಡುವ ತಮಿಳುನಾಡು ಭಕ್ತರಿಗೆ ಶಬರಿಮಲೆ ಅಯ್ಯಪ್ಪನ್ ದೇವಾಲಯ ತೆರೆಯುವ ಸಮಯ, ಪೂಜಾ ಸಮಯಗಳು, ಹತ್ತಿರದ ದೇವಾಲಯಗಳು, ವಸತಿ ಎಲ್ಲದರ ಬಗ್ಗೆ ಕೂಡ ಮಾಹಿತಿ ಸಿಗಲಿದೆ. ರೆಸ್ಟೋರೆಂಟ್‌ಗಳು, ವಿಮಾನ ನಿಲ್ದಾಣ, ರೈಲು ನಿಲ್ದಾಣ, ಬಸ್ ನಿಲ್ದಾಣಗಳು ಮತ್ತು ಕೇರಳ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ಗಳ ಆಗಮನ ಮತ್ತು ನಿರ್ಗಮನ ಸಮಯದ ಬಗ್ಗೆ ಸುಲಭವಾಗಿ ಇದರಲ್ಲಿ ಮಾಹಿತಿಯನ್ನು ಪಡೆಯಬಹುದು.
ಈ "ಸ್ವಾಮಿ ಚಾಟ್‌ಬಾಟ್" ಮಂಡಲ ಮತ್ತು ಮಕರವಿಳಕ್ಕು ಪೂಜೆಯ ಅವಧಿಯಲ್ಲಿ ಶಬರಿಮಲೆಗೆ ಭೇಟಿ ನೀಡುವ ತಮಿಳುನಾಡಿನ ಅಯ್ಯಪ್ಪ ಭಕ್ತರಿಗೆ ಅನುಕೂಲಕರ ಪ್ರವೇಶ, ಭದ್ರತೆ ಮತ್ತು ದೇವಾಲಯ ಸಂಬಂಧಿತ ಸೇವೆಗಳನ್ನು ಸುಲಭವಾಗಿ ಒದಗಿಸುತ್ತದೆ. ತಮಿಳುನಾಡಿನಿಂದ ಶಬರಿಮಲೆಗೆ ತೆರಳುವ ಜನರು ಈ ವಿವರಗಳನ್ನು ತಿಳಿದುಕೊಳ್ಳುವ ಮೂಲಕ ಸುರಕ್ಷಿತವಾಗಿ ಮತ್ತು ತೊಂದರೆಯಿಲ್ಲದೆ ಭೇಟಿ ನೀಡಬಹುದು.