ಸ್ನ್ಯಾನ್ ಫ್ರಾನ್ಸಿಸ್ಕೊ: ಭಾರತ ಮೂಲದ ಉದ್ಯಮಿ, ಲೇಖಕ ಶ್ರೀರಾಮ ಕೃಷ್ಣನ್ ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ಅಮೆರಿಕದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇಮಕ ಮಾಡಿದ್ದಾರೆ.
'ಶ್ರೀರಾಮ ಕೃಷ್ಣನ್ ಅವರು ಶ್ವೇತಭವನದ ವಿಜ್ಞಾನ ಮತ್ತು ತಂತ್ರಜ್ಞಾನ ನೀತಿ ಕಚೇರಿಯಲ್ಲಿ ಕೃತಕ ಬುದ್ಧಿಮತ್ತೆಯ ಹಿರಿಯ ನೀತಿ ಸಲಹೆಗಾರರಾಗಿ ಸೇವೆ ಸಲ್ಲಿಸಲಿದ್ದಾರೆ' ಎಂದು ಟ್ರಂಪ್ ಭಾನುವಾರ ಘೋಷಿಸಿದ್ದಾರೆ.
ಈ ಹಿಂದೆ ಮೈಕ್ರೋಸಾಫ್ಟ್, ಟ್ವಿಟರ್, ಯಾಹೂ, ಫೇಸ್‌ಬುಕ್ ಮತ್ತು ಸ್ನ್ಯಾಪ್‌ನಲ್ಲಿ ಉತ್ಪನ್ನ (Product) ತಂಡಗಳನ್ನು ಮುನ್ನಡೆಸಿರುವ ಕೃಷ್ಣನ್, ವೈಟ್ ಹೌಸ್ AI ಮತ್ತು ಕ್ರಿಪ್ಟೋ ಮುಖ್ಯಸ್ಥರಾಗಿರುವ ಡೇವಿಡ್ ಒ. ಸ್ಯಾಕ್ಸ್ ಜೊತೆಗೆ ಕೆಲಸ ಮಾಡಲಿದ್ದಾರೆ.
ದೇಶಕ್ಕೆ ಸೇವೆ ಸಲ್ಲಿಸಲು ಮತ್ತು ಎಐನಲ್ಲಿ ಅಮೆರಿಕದ ನಾಯಕತ್ವವನ್ನು ಖಚಿತಪಡಿಸಿಕೊಳ್ಳಲು ಡೇವಿಡ್ ಸ್ಯಾಕ್ಸ್ ಅವರೊಂದಿಗೆ ಕೆಲಸ ಮಾಡಲು ಅವಕಾಶ ಲಭಿಸಿದ್ದು ನನಗೆ ಸಿಕ್ಕಿ ಗೌರವ ಎಂದು ಕೃಷ್ಣನ್ ಹೇಳಿದ್ದಾರೆ.
ಕೃಷ್ಣನ್ ಅವರ ನೇಮಕವನ್ನು ಅಮೆರಿಕದ ಭಾರತೀಯ ಸಮುದಾಯ ಸ್ವಾಗತಿಸಿದೆ.
'ನಾವು ಶ್ರೀರಾಮ ಕೃಷ್ಣನ್ ಅವರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇವೆ. ಅವರನ್ನು ಶ್ವೇತಭವನದ ಕೃತಕ ಬುದ್ಧಿಮತ್ತೆ ವಿಭಾಗದ ನೀತಿ ಸಲಹೆಗಾರರನ್ನಾಗಿ ನೇಮಿಸಿರುವುದಕ್ಕೆ ಸಂತೋಷಪಡುತ್ತೇವೆ' ಎಂದು ಇಂಡಿಯಾಸ್ಪೋರಾದ ಕಾರ್ಯನಿರ್ವಾಹಕ ನಿರ್ದೇಶಕ ಸಂಜೀವ್ ಜೋಶಿಪುರ ಹರ್ಷ ವ್ಯಕ್ತಪಡಿಸಿದ್ದಾರೆ.