ಜೆರುಸಲೇಂ: 'ಹಮಾಸ್ ಬಂಡುಕೋರರ ಗುಂಪಿನ ಉನ್ನತ ನಾಯಕರ ಹತ್ಯೆ ಮಾಡಿದಂತೆಯೇ, ಯೆಮೆನ್‌ನ ಹೂಥಿ ಬಂಡುಕೋರರ ಗುಂಪಿನ ನಾಯಕರ ವಿರುದ್ಧವೂ ಕಠಿಣ ಕ್ರಮ ನಿಶ್ಚಿತ' ಎಂದು ಇಸ್ರೇಲ್‌ನ ರಕ್ಷಣಾ ಸಚಿವರು ಎಚ್ಚರಿಕೆ ನೀಡಿದ್ದಾರೆ.
ಈ ಹೇಳಿಕೆಯ ಮೂಲಕ ಸಚಿವ ಇಸ್ರೇಲಿ ಕಾಟ್ಜ್ ಅವರು, ಸೇನೆಯೇ ಹಮಾಸ್ ಬಂಡುಕೋರ ಗುಂಪಿನ ನಾಯಕ ಇಸ್ಮಾಯಿಲ್ ಹನಿಯೇ ಹತ್ಯೆ ನಡೆಸಿತ್ತು ಎಂದು ದೃಢಪಡಿಸಿದ್ದಾರೆ.
ಕಳೆದ ಜೂನ್‌ನಲ್ಲಿ ಇರಾನ್‌ನಲ್ಲಿ ಸಂಭವಿಸಿದ್ದ ಸ್ಫೋಟದಲ್ಲಿ ಹನಿಯೇ ಸತ್ತಿದ್ದರು. ಈ ಸ್ಫೋಟದ ಹಿಂದೆ ಇಸ್ರೇಲ್ ಸೇನೆಯ ಪಾತ್ರವಿದೆ ಎಂದು ಈ ಹಿಂದೆ ಬಲವಾಗಿ ಪ್ರತಿಪಾದಿಸಲಾಗಿತ್ತು.
ಸೋಮವಾರ ಈ ಕುರಿತು ಹೇಳಿಕೆ ನೀಡಿರುವ ಕಾಟ್ಜ್, 'ಹೂಥಿ ನಾಯಕರಿಗೂ ಇಂಥದೇ ಸ್ಥಿತಿ ಬರಲಿದೆ. ಇಸ್ರೇಲ್ ಸೇನೆ ಹಿಂದೆ ಹಮಾಸ್, ಹಿಜ್ಬುಲ್ಲಾದ ಹಿರಿಯ ನಾಯಕರ ಹತ್ಯೆ ಮಾಡಿದೆ. ಸಿರಿಯಾದ ಬಶರ್ ಅಸಾದ್ ಆಡಳಿತ ಪದಚ್ಯುತಿಗೆ ನೆರವಾಗಿದೆ' ಎಂದೂ ಹೇಳಿದರು.
'ಹೂಥಿ ಬಂಡುಕೋರರ ನೆಲೆಯನ್ನು ಗುರಿಯಾಗಿಸಿ ನಾವು ದಾಳಿಯನ್ನು ನಡೆಸಲಿದ್ದೇವೆ. ಹೂಥಿ ನಾಯಕರ ತಲೆ ಕತ್ತರಿಸುತ್ತೇವೆ. ಟೆಹರಾನ್, ಗಾಜಾ, ಲೆಬನಾನ್‌ನಲ್ಲಿ ಕ್ರಮವಾಗಿ ಹನಿಯೇ, ಸಿನ್ವರ್ ಮತ್ತು ನಸ್ರಲ್ಲಾಗೂ ಇದನ್ನೇ ಮಾಡಿದ್ದೆವು' ಎಂದು ಹೇಳಿದರು.
ಇರಾನ್ ಬೆಂಬಲಿತ ಹೂಥಿ ಬಂಡುಕೋರರು, ಈಗ ನಡೆಯುತ್ತಿರುವ ಯುದ್ಧದಲ್ಲಿ ಇಸ್ರೇಲ್ ನೆಲೆ ಗುರಿಯಾಗಿಸಿ ಹಲವು ಬಾರಿ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದ್ದಾರೆ. ಶನಿವಾರ ಟೆಲ್ ಅವಿವ್ ನಗರದಲ್ಲಿ ನಡೆಸಿದ್ದ ದಾಳಿಯಲ್ಲಿ ಕನಿಷ್ಠ 16 ಮಂದಿ ಗಾಯಗೊಂಡಿದ್ದರು.