ವಾಷಿಂಗ್ಟನ್: ಅಮೆರಿಕದ ಕೆಲವು ವಸ್ತುಗಳ ಆಮದಿಗೆ ಭಾರತವು ವಿಧಿಸಿರುವ ಹೆಚ್ಚಿನ ಸುಂಕಕ್ಕೆ ಪ್ರತಿಯಾಗಿ ಅಷ್ಟೇ ಮೊತ್ತದ ಸುಂಕ ವಿಧಿಸುವುದಾಗಿ ಅಮೆರಿಕದ ಅಧ್ಯಕ್ಷರಾಗಿ ಚುನಾಯಿತರಾಗಿರುವ ಡೊನಾಲ್ಡ್ ಟ್ರಂಪ್ ಅವರು ಎಚ್ಚರಿಸಿದ್ದಾರೆ.
ಅವರು ನಮ್ಮ ವಸ್ತುಗಳಿಗೆ ಸುಂಕವನ್ನು ವಿಧಿಸಿದರೆ, ನಾವು ಅಷ್ಟೇ ಮೊತ್ತದ ಸುಂಕ ವಿಧಿಸುತ್ತೇವೆ.
ಬಹುತೇಕ ಎಲ್ಲ ಸಂದರ್ಭಗಳಲ್ಲಿ ಅವರು ನಮಗೆ ಸುಂಕ ವಿಧಿಸುತ್ತಾರೆ. ಆದರೆ ನಾವು ಅವರಿಗೆ ಸುಂಕ ವಿಧಿಸಿರಲಿಲ್ಲ' ಎಂದು ಟ್ರಂಪ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಚೀನಾದೊಂದಿಗಿನ ಸಂಭಾವ್ಯ ವ್ಯಾಪಾರ ಒಪ್ಪಂದದ ಬಗೆಗಿನ ಪ್ರಶ್ನೆಗೆ ಉತ್ತರಿಸುವ ವೇಳೆ ಟ್ರಂಪ್ ಅವರು, ಭಾರತ ಮತ್ತು ಬ್ರೆಜಿಲ್ ಅಮೆರಿಕದ ವಸ್ತುಗಳಿಗ ಹೆಚ್ಚಿನ ಸುಂಕ ವಿಧಿಸುತ್ತಿವೆ ಎಂದು ಹೇಳಿದ್ದಾರೆ.
'ಯಾರಾದರೂ ಸುಂಕ ವಿಧಿಸಿದರೆ ಅಷ್ಟೇ ಪ್ರಮಾಣದ ಸುಂಕ ವಿಧಿಸುವುದು ಅತ್ಯಗತ್ಯ. ನಾವು ಭಾರತಕ್ಕೆ ಸೈಕಲ್ ಕಳುಹಿಸುತ್ತೇವೆ. ಅವರೂ ನಮಗೆ ಸೈಕಲ್ ಕಳುಹಿಸುತ್ತಾರೆ. ಆದರೆ ಅವರು ನಮಗೆ 100- 200 ಸುಂಕ ವಿಧಿಸುತ್ತಾರೆ. ಅವರ ಸುಂಕ ಅಧಿಕವಾಗಿರುತ್ತದೆ' ಎಂದು ಟ್ರಂಪ್ ಹೇಳಿದ್ದಾರೆ.
'ಕ್ರಿಯೆಗೆ ಸಮನಾದ ಪ್ರತಿಕ್ರಿಯೆ ಟ್ರಂಪ್ ಆಡಳಿತದ ಲಕ್ಷಣವಾಗಿರುತ್ತದೆ. ನಾವು ನಿಮ್ಮೊಂದಿಗೆ ಹೇಗೆ ನಡೆದುಕೊಳ್ಳಬೇಕೆಂದು ಬಯಸುತ್ತಿರೋ ಅದಕ್ಕೆ ಸರಿಯಾಗಿ ನೀವು ನಮ್ಮೊಂದಿಗೆ ನಡೆದುಕೊಳ್ಳಬೇಕು' ಎಂದು ಟ್ರಂಪ್ ಅವರ ವಾಣಿಜ್ಯ ಕಾರ್ಯದರ್ಶಿ ಪಿಕ್ ಹಾವರ್ಡ್ ಲುಟ್ನಿಕ್ ಅವರು ಹೇಳಿದ್ದಾರೆ.