ನವದೆಹಲಿ: ಮಾಜಿ ಪ್ರಧಾನಿ ಮನಮೋಹನ ಸಿಂಗ್ ಅವರ ಅಸ್ಥಿಯನ್ನು ಮಜ್‌ನೂ ಕ ತಿಲಾ ಗುರುದ್ವಾರದ ಬಳಿಯ ಯುಮುನಾ ನದಿಯಲ್ಲಿ ಭಾನುವಾರ ವಿಸರ್ಜನೆ ಮಾಡಲಾಯಿತು.
ಸಿಂಗ್ ಅವರ ಅಂತ್ಯಕ್ರಿಯೆ ನಡೆದಿದ್ದ ನಿಗಮ್ ಭೋದ್ ಘಾಟ್‌ನಿಂದ ಭಾನುವಾರ ಬೆಳಿಗ್ಗೆ ಅಸ್ಥಿಯನ್ನು ಸಂಗ್ರಹಿಸಿದ ಅವರ ಕುಟುಂಬಸ್ಥರು ಬಳಿಕ ಅದನ್ನು ಯುಮುನಾ ನದಿ ದಂಡೆಯಲ್ಲಿನ 'ಅಸ್ಥ್ ಘಾಟ್'ಗೆ ತಂದರು.
ನಂತರ ಸಿಖ್ ಧರ್ಮದ ಪ್ರಕಾರ ವಿಧಿವಿಧಾನಗಳನ್ನು ನಡೆಸಿ ಚಿತಾಭಸ್ಮವನ್ನು ವಿಸರ್ಜಿಸಲಾಯಿತು.
ಚಿತಾಭಸ್ಮ ವಿಸರ್ಜನೆ ವೇಳೆ ಸಿಂಗ್ ಅವರ ಪತ್ನಿ ಗುರುಶರಣ್ ಕೌರ್ ಮತ್ತು ಪುತ್ರಿಯರಾದ ಉಪಿಂದರ್ ಸಿಂಗ್, ದಮನ್ ಸಿಂಗ್ ಮತ್ತು ಅಮೃತ್ ಸಿಂಗ್ ಅವರು ಉಪಸ್ಥಿತರಿದ್ದರು.
ಮೋತಿಲಾಲ್ ನೆಹರೂ ಮಾರ್ಗದಲ್ಲಿರುವ ತಮ್ಮ ಅಧಿಕೃತ ನಿವಾಸದಲ್ಲಿ ಸಿಂಗ್ ಕುಟುಂಬಸ್ಥರು, ಸಿಖ್ ವಿಧಿವಿಧಾನಗಳ ಅನ್ವಯ ಜನವರಿ 1ರಂದು 'ಅಖಂಡ ಪಥ್' ನಡೆಸಲಿದ್ದಾರೆ. ಸಂಸತ್ತಿನ ಬಳಿಯಿರುವ ರಖಬ್ ಗಂಜ್ ಗುರುದ್ವಾರದ ಬಳಿ ಜನವರಿ 3ರಂದು 'ಭೋಗ್' ಕಾರ್ಯಕ್ರಮ.'ಅಂತಿಮ್ ಆರ್ದಾಸ್' ಮತ್ತು 'ಕೀರ್ತನ್' ನಡೆಯಲಿದೆ.
92 ವರ್ಷದ ಸಿಂಗ್ ಅವರು ಆನಾರೋಗ್ಯದಿಂದಾಗಿ ಡಿ.26ರಂದು ನಿಧನ ಹೊಂದಿದ್ದರು. ದೆಹಲಿಯ ನಿಗಮ್ ಭೋದ್ ಘಾಟ್‌ನಲ್ಲಿ ಶನಿವಾರ ಅವರ ಅಂತ್ಯಕ್ರಿಯೆ ನಡೆದಿತ್ತು.