ಕುಂಬಳೆ: ಕಾಸರಗೋಡಿನ ಕನ್ನಡ ಶಾಲೆಗಳು ಮತ್ತು ಕನ್ನಡ ಭಾಷಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಸರಿಪಡಿಸಲು ಹಾಗು ಕನ್ನಡ ಅಸ್ಮಿತೆಯನ್ನು ಕಾಪಾಡಲು ಒಕ್ಕೂಟ ವ್ಯವಸ್ಥೆಯೊಳಗಿನ ನೀತಿ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಲು ಕೇರಳ ಸರ್ಕಾರದ ಮೇಲೆ ಒತ್ತಡ ತರಬೇಕೆಂದು ಕನ್ನಡ ಸಾಹಿತ್ಯ ಪರಿಷತ್ ಉಡುಪಿ ಜಿಲ್ಲಾ ಸಮಿತಿ ನೇತೃತ್ವದಲ್ಲಿ ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಕರ್ನಾಟಕ ಸರ್ಕಾರವನ್ನು ಇತ್ತೀಚೆಗೆ ಖುದ್ಧು ವಿನಂತಿಸಿದೆ.
ಕಾಸರಗೋಡಿನ ಕನ್ನಡ ಭಾಷಿಕರ ಮತ್ತು ಕನ್ನಡ ಶಾಲೆಗಳ ಮೇಲೆ ಆಗುತ್ತಿರುವ ದಬ್ಬಾಳಿಕೆ ಮತ್ತು ಭಾಷಾ ವಿರೋಧಿ ನಿಲುವು ಬಗ್ಗೆ ಕನ್ನಡ ಸಾಹಿತ್ಯ ಪರಿಷತ್ ಅತ್ಯಂತ ಕಳವಳಕ್ಕೆ ಒಳಗಾಗಿದೆ. ಈ ನಿಟ್ಟಿನಲ್ಲಿ ಉಡುಪಿ ಜಿಲ್ಲೆ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಕಾಸರಗೋಡು ಜಿಲ್ಲೆಯ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಗಳು ಮತ್ತು ಹೊಂದಿಕೊಂಡಂತಹ ತಾಲೂಕು ಘಟಕದ ಅಧ್ಯಕ್ಷರುಗಳು ಸಭೆ ನಡೆಸಿ ತೀವ್ರವಾದ ಪ್ರತಿಭಟನೆ ವ್ಯಕ್ತಪಡಿಸಲು ತೀರ್ಮಾನಿಸಿತು. ಆದುದರಿಂದ ಕರ್ನಾಟಕ ಸರ್ಕಾರದ ದಿಟ್ಟ ಮುಖ್ಯಮಂತ್ರಿಗಳಾದ ತಾವು ಕೇರಳ ರಾಜ್ಯದ ಮುಖ್ಯಮಂತ್ರಿಗಳು ಮತ್ತು ಸಂಬಂಧಿಸಿದ ಇಲಾಖೆಯೊಡನೆ ಸಂಪರ್ಕ ನಡೆಸಿ ಕಾಸರಗೋಡಿನ ಕನ್ನಡ ಶಾಲೆಗಳು ಮತ್ತು ಕನ್ನಡ ಭಾಷಿಗರ ಮೇಲೆ ಆಗುತ್ತಿರುವ ದಬ್ಬಾಳಿಕೆಯನ್ನು ಸರಿಪಡಿಸಲು ಮುಂದಾಗಬೇಕೆಂದು ಮನವಿಯಲ್ಲಿ ವಿನಂತಿಸಿದೆ. ಕನ್ನಡ ಪರವಾದ ನಿಲುವನ್ನು ಕೇರಳ ರಾಜ್ಯ ಸರಿ ಮಾಡಿಕೊಳ್ಳದೆ ಇದ್ದಲ್ಲಿ ಸಾಹಿತ್ಯ ಪರಿಷತ್ತು ಮುಂದಿನ ದಿನಗಳಲ್ಲಿ ತೀವ್ರವಾದ ಪ್ರತಿಭಟನೆಯನ್ನು ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಮುನ್ನೆಚ್ಚರಿಕೆಯನ್ನು ನೀಡಿದೆ.
ಕನ್ನಡ ಸಾಹಿತ್ಯ ಪರಿಷತ್ತು ಉಡುಪಿ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರ ನೇತೃತ್ವದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಡಾ.ಜಯಪ್ರಕಾಶ್‍ನಾರಾಯಣ ತೊಟ್ಟೆತ್ತೋಡಿ, ಕರ್ನಾಟಕ ಗಮಕ ಕಲಾ ಪರಿಷತ್ತು ಕೇರಳ ಘಟಕ ಅಧ್ಯಕ್ಷ ತೆಕ್ಕೆಕೆರೆ ಶಂಕರನಾರಾಯಣ ಭಟ್, ತಾಲೂಕು ಅಧ್ಯಕ್ಷರುಗಳಾದ ಪುಂಡಲೀಕ ಮರಾಠೆ(ಕಾಪು), ಶ್ರೀನಿವಾಸ ಭಂಡಾರಿ(ಹೆಬ್ರಿ), ಡಾ. ಉಮೇಶ್ ಪುತ್ರನ್(ಕುಂದಾಪುರ), ಡಾ.ರಘು ನಾಯ್ಕ(ಬೈಂದೂರು), ಜಿ.ರಾಮಚಂದ್ರ ಐತಾಳ್(ಬ್ರಹ್ಮಾವರ), ಪ್ರಭಾಕರ ಶೆಟ್ಟಿ(ಕಾರ್ಕಳ) ಮೊದಲಾದವರು ಉಡುಪಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.