ಕಾಸರಗೋಡು: ಮರವನ್ನೇರಿದ್ದ ಬೃಹತ್ ಗಾತ್ರದ ಹೆಬ್ಬಾವು ಆಯತಪ್ಪಿ ವಿದ್ಯುತ್ ತಂತಿಗೆ ಬಿದ್ದು ಶಾಕ್ ತಗುಲಿದ ಪರಿಣಾಮ ಜೀವನ್ಮರಣದ ಮಧ್ಯೆ ಹೋರಾಟ ನಡೆಸಿ ಕೊನೆಗೂ ಜೀವ ತೆತ್ತಿದೆ. ಕಾಸರಗೋಡು ಹಳೇ ಬಸ್ ನಿಲ್ದಾಣ ವಠಾರದಲ್ಲಿ ಗುರುವಾರ ಬೆಳಗ್ಗೆ ಘಟನೆ ನಡೆದಿದೆ. ವಿದ್ಯುತ್ ತಂತಿ ಹಾದುಹೋಗುತ್ತಿದ್ದ ಪ್ರದೇಶದ ಮರವೇರಿದ್ದ ಹೆಬ್ಬಾವು ಜಾರಿಬಿದ್ದು, ವಿದ್ಯುತ್ ತಂತಿಗೆ ಸಿಲುಕಿಕೊಂಡಿದೆ.
ತಂತಿಯಲ್ಲಿ ಒದ್ದಾಡುತ್ತಿದ್ದ ಹೆಬ್ಬಾವನ್ನು ಕಂಡ ಸ್ಥಳೀಯರು ವಿದ್ಯುತ್ ಇಲಾಖೆಗೆ ನೀಡಿದ ಮಾಹಿತಿಯನ್ವಯ ಸಿಬ್ಬಂದಿ ಸ್ಥಳಕ್ಕಾಗಮಿಸಿ ಉರಗತಜ್ಞ ಅಡ್ಕತ್ತಬೈಲ್ ನಿವಾಸಿ ಅಮೀನ್ ಎಂಬವರನ್ನು ಕರೆಸಿ ಹೆಬ್ಬಾವನ್ನು ಕೆಳಗಿಳಿಸಿದರೂ, ಪ್ರಾಣಪಕ್ಷಿ ಹಾರಿಹೋಗಿತ್ತು. ನಂತರ ಹೆಬ್ಬಾವನ್ನು ಅರಣ್ಯಾಧಿಕಾರಿಗಳ ವಶಕ್ಕೆ ಒಪ್ಪಿಸಲಾಯಿತು.