ಕಾಸರಗೋಡು: ಮಂಡ್ಯದಲ್ಲಿ ಜರುಗಲಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಕೊಡಮಾಡುವ ಸುವರ್ಣ ಮಹೋತ್ಸವ ಸ್ಮಾರಕ ಸಾಹಿತ್ಯ ಸಾಧಕ ಸನ್ಮಾನಕ್ಕೆ ಕಾಸರಗೋಡಿನ ಹಿರಿಯ ವಿದ್ವಾಂಸ, ನಿವೃತ್ತ ಕನ್ನಡ ಪ್ರಾಧ್ಯಾಪಕ ಪ್ರೊ.ಪಿ.ಶ್ರೀಕೃಷ್ಣ ಭಟ್ ಅವರು ಆಯ್ಕೆಯಾಗಿದ್ದಾರೆ. ಡಿ.20ರಂದು ಸಂಜೆ 6ಕ್ಕೆ ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯಲ್ಲಿ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮಿಗಳು ಹಾಗೂ ಶ್ರೀ ತೋಂಟದ ಸಿದ್ಧರಾಮ ಸ್ವಾಮಿಗಳ ಉಪಸ್ಥಿತಿಯಲ್ಲಿ ಕರ್ನಾಟಕ ಸರ್ಕಾರದ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ
ಪಿ.ವಿಶ್ವನಾಥ ಶೆಟ್ಟಿ ಅವರು ಸಾಧಕರನ್ನು ಸನ್ಮಾನಿಸಲಿದ್ದಾರೆ.
ಪ್ರೊ.ಪಿ.ಶ್ರೀಕೃಷ್ಣ ಭಟ್ಟರು ಸುರತ್ಕಲ್‍ನ ಗೋವಿಂದದಾಸ ಕಾಲೇಜಿನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿ, 1970ರಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ವಿಭಾಗದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇರಿ, ಅನಂತರ ವಿಭಾಗದಮುಖ್ಯಸ್ಥರಾಗಿದ್ದರು. ಸುದೀರ್ಘ 28 ವರ್ಷಗಳ ಅಧ್ಯಾಪನದ ನಂತರ 1998ರಲ್ಲಿ ನಿವೃತ್ತರಾದ ಪ್ರೊ.ಶ್ರೀಕೃಷ್ಣ ಭಟ್ಟರು ಕಣ್ಣೂರು ವಿಶ್ವವಿದ್ಯಾಲಯದ ಭಾರತೀಯ ಭಾಷಾ ಅಧ್ಯಯನಾಂಗದ ಸ್ಥಾಪನೆಗೆ ಪ್ರಯತ್ನಿಸಿ ನಂತರ ಆಸಂಸ್ಥೆಯ ಸ್ಥಾಪಕ ನಿರ್ದೇಶಕರಾಗಿ ಹತ್ತು ವರ್ಷಗಳ ಕಾಲ ಸೇವೆಯನ್ನು ಸಲ್ಲಿಸಿದರು.
ಹಲವಾರು ಮಂದಿ ಪಿಎಚ್‍ಡಿ ಸಂಶೋಧಕರಿಗೆ ಮಾರ್ಗದರ್ಶನ ಮಾಡಿರುವ ಇವರು ಕೇರಳ ಸರ್ಕಾರದ ಕನ್ನಡ ಪಠ್ಯಪುಸ್ತಕ ರಚನಾ ಸಮಿತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಸುದೀರ್ಘ ಕಾಲಸೇವೆ ಸಲ್ಲಿಸಿದ್ದಾರೆ. ಹಲವಾರು ಕೃತಿಗಳು ಪ್ರಕಟಗೊಂಡಿದ್ದು, ಹಲವು ಪ್ರಶಸ್ತಿಗಳನ್ನೂ ಪಡೆದುಕೊಂಡಿದ್ದಾರೆ.