ಚಳಿಯ ನಡುವೆಯೂ ಕೆಲವರು ರಾತ್ರಿ ಸಮಯದಲ್ಲಿ ಬೆವರಿನಿಂದ ಒದ್ದೆಯಾಗಿ ಎಚ್ಚರಗೊಳ್ಳುತ್ತಾರೆ ಎಂದರೆ ನಂಬುತ್ತೀರಾ? ಹೌದು ಕೆಲವರಿಗೆ ಎಷ್ಟೇ ಚಳಿ ಇರಲಿ ರಾತ್ರಿ ಸಮಯದಲ್ಲಿ ಬೆವರುತ್ತಾರೆ. ಅದಲ್ಲದೆ ಈ ರೀತಿ ಲಕ್ಷಣ ಪದೇ ಪದೇ ಕಂಡುಬರುತ್ತಿದ್ದರೆ ಅದನ್ನು ಲಘುವಾಗಿ ತೆಗೆದುಕೊಳ್ಳುವುದು ಸರಿಯಲ್ಲ ಎಂದು ತಜ್ಞರು ಹೇಳುತ್ತಾರೆ. ಶೀತ ವಾತಾವರಣ ಇದ್ದಾಗಲೂ ಕೂಡ ರಾತ್ರಿ ಸಮಯದಲ್ಲಿ ಬೆವರುವುದು ಕೆಲವು ಗಂಭೀರ ಆರೋಗ್ಯ ಸಮಸ್ಯೆಗಳ ಸಂಕೇತವಾಗಿರಬಹುದು ಎಂದು ತಜ್ಞರು ಎಚ್ಚರಿಸುತ್ತಾರೆ. ಹಾಗಾಗಿ ಈ ರೀತಿಯ ಸಮಸ್ಯೆಗಳು ಕಂಡುಬರುತ್ತಿದ್ದರೆ ತಕ್ಷಣ ತಜ್ಞರನ್ನು ಸಂಪರ್ಕಿಸಿ. ಅದಕ್ಕೂ ಮೊದಲು ಈ ರೀತಿಯ ಲಕ್ಷಣಗಳು ಯಾಕಾಗಿ ಕಂಡು ಬರುತ್ತದೆ? ಇದರ ಸಂಕೇತವೇನು? ಎಂಬುದನ್ನು ತಿಳಿದುಕೊಳ್ಳಿ.
ಹಾಡ್ಗ್ಕಿನ್ ಲಿಂಫೋಮಾ ಕ್ಯಾನ್ಸರ್: ಇದು ದುಗ್ಧರಸ ಗ್ರಂಥಿಗಳ ಮೇಲೆ ಪರಿಣಾಮ ಬೀರುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ರಾತ್ರಿ ಹೆಚ್ಚು ಹೆಚ್ಚು ಬೆವರು ಬಂದು ಒದ್ದೆಯಾಗುವುದು ಈ ರೋಗದ ಮುನ್ಸೂಚನೆ ಆಗಿರಬಹುದು. ಇದರ ಆರಂಭಿಕ ಲಕ್ಷಣಗಳಲ್ಲಿ ತೂಕ ನಷ್ಟ ಮತ್ತು ಜ್ವರವೂ ಸೇರಿವೆ.
ಹೈಪರ್ ಥೈರಾಯ್ಡಿಸಮ್: ಅತಿಯಾಗಿ ಕೆಲಸ ಮಾಡಿದಾಗಲೂ ರಾತ್ರಿ ಸಮಯದಲ್ಲಿ ಬೆವರು ಬರಬಹುದು. ಈ ಸ್ಥಿತಿಯು ಹೃದಯ ಬಡಿತವನ್ನು ಹೆಚ್ಚಿಸುತ್ತದೆ. ಹಾಗಾಗಿ ಇದು ದೇಹದ ಉಷ್ಣತೆಯನ್ನು ನಿಯಂತ್ರಿಸುವಲ್ಲಿ ಸಮಸ್ಯೆಗಳನ್ನು ಉಂಟುಮಾಡಬಹುದು.
ಋತುಬಂಧ ಅಥವಾ ಹಾರ್ಮೋನುಗಳ ಬದಲಾವಣೆಗಳು: ಮಹಿಳೆಯರಲ್ಲಿ ಋತುಬಂಧದ ಸಮಯದಲ್ಲಿ ಹಾರ್ಮೋನುಗಳ ಬದಲಾವಣೆಗಳು ಶೀತದಲ್ಲಿಯೂ ಬೆವರುವಂತೆ ಮಾಡುತ್ತದೆ.
ಹೃದಯ ಸಂಬಂಧಿತ ಸಮಸ್ಯೆಗಳು: ರಾತ್ರಿಯಲ್ಲಿ ಬೆವರುವುದು ಹೃದಯಾಘಾತದಂತಹ ಹೃದಯ ಸಮಸ್ಯೆಗಳ ಸಂಕೇತವಾಗಿದೆ. ಇದು ಆಗಾಗ ಕಂಡುಬರುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು.
ಇಂತಹ ಪರಿಸ್ಥಿತಿಯಲ್ಲಿ ಏನು ಮಾಡಬೇಕು?
ಚಳಿಗಾಲದ ರಾತ್ರಿಯಲ್ಲಿ ಪದೇ ಪದೇ ಬೆವರುತ್ತಿದ್ದರೆ, ಅದನ್ನು ನಿರ್ಲಕ್ಷಿಸಬೇಡಿ. ವೈದ್ಯರನ್ನು ಸಂಪರ್ಕಿಸಿ, ಅಗತ್ಯ ಪರೀಕ್ಷೆಗಳನ್ನು ಮಾಡಿಸಿಕೊಳ್ಳಿ. ಇದಲ್ಲದೆ, ಪ್ರತಿನಿತ್ಯ ಸಮತೋಲಿತ ಆಹಾರವನ್ನು ಸೇವಿಸಿ. ಸಾಕಷ್ಟು ನೀರು ಕುಡಿಯಿರಿ. ಹೈಡ್ರೇಟ್ ಆಗಿರುವುದನ್ನು ಮರೆಯಬೇಡಿ. ಒತ್ತಡವನ್ನು ಕಡಿಮೆ ಮಾಡಲು ಯೋಗ ಅಥವಾ ಧ್ಯಾನದ ಸಹಾಯ ತೆಗೆದುಕೊಳ್ಳಿ. ಅಲ್ಲದೆ ರಾತ್ರಿ ಸಮಯದಲ್ಲಿ ತಂಪಾದ ನೀರನ್ನು ಕುಡಿಯುವುದು ಒಳ್ಳೆಯದು. ಜೊತೆಗೆ ಮಲಗುವಾಗ ಸಡಿಲವಾದ, ಹಗುರವಾದ, ಹತ್ತಿ ಅಥವಾ ಲಿನಿನ್ ಪೈಜಾಮಾವನ್ನು ಧರಿಸಿ. ವಾಕಿಂಗ್, ಈಜು, ನೃತ್ಯ, ಬೈಸಿಕಲ್ ಇತ್ಯಾದಿಗಳ ಮೂಲಕ ಪ್ರತಿದಿನ ವ್ಯಾಯಾಮ ಮಾಡಿ. ಹಗುರವಾಗಿರುವ ಹೊದಿಕೆಗಳನ್ನು ಬಳಸಿ.