ಮುಂಬೈ: ಮುಂಬೈ ಕರಾವಳಿಯಲ್ಲಿರುವ ಪ್ರಸಿದ್ಧ ಎಲಿಫೆಂಟಾ ಗುಹೆಗಳನ್ನು ನೋಡಲು ಪ್ರವಾಸಿಗರನ್ನು ಹೊತ್ತೊಯ್ಯುತ್ತಿದ್ದ ಪ್ರಯಾಣಿಕರ ಹಡಗೊಂದು ಸಮುದ್ರದಲ್ಲಿ ಮಗುಚಿದೆ.
ಈ ಘಟನೆ ಇಂದು ಸಂಜೆ 4 ಗಂಟೆ ಸುಮಾರು ಸಂಭವಿಸಿದ್ದು ಘಟನೆಯಲ್ಲಿ ಇಬ್ಬರು ಮೃತಪಟ್ಟಿದ್ದಾರೆ ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.
ಗುಚಿದ ಹಡಗಿನಲ್ಲಿ 66 ಜನ ಇದ್ದರು. ಇವರಲ್ಲಿ ಇದುವರೆಗೆ 35 ಕ್ಕೂ ಹೆಚ್ಚಯ ಜನರನ್ನು ರಕ್ಷಿಸಲಾಗಿದೆ. ಇವರು ಗೇಟ್‌ವೇ ಆಫ್ ಇಂಡಿಯಾದಿಂದ ಹೊರಟಿದ್ದರು. ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ ಎಂದು ನೌಕಾಪಡೆಯ ಅಧಿಕಾರಿಗಳು ತಿಳಿಸಿದ್ದಾರೆ.
ಸ್ಥಳದಲ್ಲಿ ನೌಕಾಪಡೆಯ ಹಡಗುಗಳು, ಕೋಸ್ಟ್ ಗಾರ್ಡ್ ಸಿಬ್ಬಂದಿ ತಕ್ಷಣವೇ ಬಿರುಸಿನ ಕಾರ್ಯಾಚರಣೆ ಕೈಗೊಂಡು ಹೆಚ್ಚಿನ ಸಾವು ನೋವು ಆಗುವುದನ್ನು ತಪ್ಪಿಸಿದ್ದಾರೆ.
ಘಟನಾ ಸ್ಥಳದಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳೂ ಕಾರ್ಯಾಚರಣೆ ಕೈಗೊಂಡಿವೆ. ಜವಾಹರಲಾಲ್ ನೆಹರು ಬಂದರು ಪ್ರಾಧಿಕಾರದ ಪೊಲೀಸ್ ಸಿಬ್ಬಂದಿ ಹಾಗೂ ಸ್ಥಳೀಯ ಮೀನುಗಾರರು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದಾರೆ.
ಮೀನುಗಾರರ ಹಡಗೊಂದು ಪ್ರವಾಸಿಗರ ಹಡಗಿಗೆ ಡಿಕ್ಕಿ ಹೊಡೆದಿದ್ದರಿಂದ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂಧಿಸಿದ ವಿಡಿಯೊಗಳು ಎಕ್ಸ್‌ನಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಮುಂಬೈ ಹಾರ್ಬರ್‌ನಿಂದ ಎಲಿಫೆಂಟಾ ನಡುಗಡ್ಡೆಗಳು 10 ಕಿ.ಮೀ ದೂರದಲ್ಲಿವೆ. ಈ ನಡುಗಡ್ಡೆಗಳಲ್ಲಿ ಶಿವ, ಪಾರ್ವತಿಯ ಗುಹಾಂತರ ದೇವಾಲಯಗಳಿವೆ.