ನವದೆಹಲಿ: 'ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಭಾರತ ಪೌರತ್ವದ ಕುರಿತು ಕೇಂದ್ರ ಸರ್ಕಾರದ ನಿಲುವೇನು' ಎಂದು ದೆಹಲಿ ಹೈಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ರಾಹುಲ್ ಗಾಂಧಿ ಅವರ ಭಾರತದ ಪೌರತ್ವವನ್ನು ರದ್ದು ಮಾಡಬೇಕು ಎಂದು ಕೋರಿ ಬಿಜೆಪಿ ನಾಯಕ ಸುಬ್ರಮಣ್ಯಂ ಸ್ವಾಮಿ ಅವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಹಂಗಾಮಿ ಮುಖ್ಯನ್ಯಾಯಮೂರ್ತಿ ವಿಭು ಭಾಖರೂ ಹಾಗೂ ನ್ಯಾಯಮೂರ್ತಿ ತುಷಾರ್ ರಾವ್ ಗೆಡೆಲಾ ಅವರಿದ್ದ ಪೀಠ ನಡೆಸಿತು.
ಸುಬ್ರಮಣ್ಯಂ ಸ್ವಾಮಿ ಅವರ ಪರವಾಗಿ ಇಷ್ಟು ದಿನ ವಾದ ಮಂಡಿಸಿದ್ದ ವಕೀಲರು ಹಿರಿಯ ವಕೀಲರಾಗಿ ತೇರ್ಗಡೆ ಹೊಂದಿದ್ದಾರೆ. ಈ ಪ್ರಕರಣದ ಕುರಿತು ಅಧ್ಯಯನ ಮಾಡಲು ಇನ್ನಷ್ಟು ಸಮಯ ಬೇಕು' ಎಂದು ಹೊಸದಾಗಿ ಈ ಪ್ರಕರಣವನ್ನು ವಾದಿಸುತ್ತಿರುವ ವಕೀಲ, ನ್ಯಾಯಾಲಯಕ್ಕೆ ಮನವಿ ಮಾಡಿದರು.
'ಈ ಪ್ರಕರಣದಲ್ಲಿ ಮುಂದುವರಿಯಲು ನಮಗೆ ಸರ್ಕಾರಿ ಪರ ವಕೀಲರ ಸಹಕಾರ ಬೇಕು. ಜೊತೆಗೆ, ಅರ್ಜಿಗೆ ಸಂಬಂಧಿಸಿ ನೋಟಿಸ್ ನೀಡುವ ಮೊದಲು ಕೇಂದ್ರ ಗೃಹ ಸಚಿವಾಲಯ ಈ ಬಗ್ಗೆ ಯಾವ ನಿಲುವು ಹೊಂದಿಗೆ ಎಂದೂ ತಿಳಿದುಕೊಳ್ಳಲು ಬಯಸುತ್ತೇವೆ. ಆದ್ದರಿಂದ, ಸಚಿವಾಲಯ ಪ್ರತಿಕ್ರಿಯೆ ಕೊಟ್ಟ ಬಳಿಕ, ನೋಟಿಸ್ ನೀಡುವ ಬಗ್ಗೆ ಆಲೋಚಿಸುತ್ತೇವೆ' ಎಂದು ಪೀಠ ಹೇಳಿತು.
'ಬ್ರಿಟಿಷ್ ಪಾಸ್‌ಪೋರ್ಟ್ ಅನ್ನು ಹೊಂದಲು, ತಾನು ಬ್ರಿಟನ್ ಪೌರತ್ವ ಹೊಂದಿದವನು ಎಂದು ರಾಹುಲ್ ಗಾಂಧಿ ಅವರು ಅಲ್ಲಿನ ಸರ್ಕಾರಕ್ಕೆ ತಿಳಿಸಿದ್ದಾರೆ. ಇದು ಭಾರತೀಯ ನಾಗರಿಕ ಕಾಯ್ದೆಯ ವಿಧಿ 9ಅನ್ನು ಉಲ್ಲಂಘಿಸುತ್ತದೆ. ಆದ್ದರಿಂದ ಅವರ ಭಾರತದ ಪೌರತ್ವವನ್ನು ರದ್ದು ಮಾಡಬೇಕು' ಎಂದು ಸುಬ್ರಮಣ್ಯಂ ಸ್ವಾಮಿ ಅವರು ಅರ್ಜಿ ಸಲ್ಲಿಸಿದ್ದರು. ವಿಚಾರಣೆಯನ್ನು 2025ರ ಜ.13ಕ್ಕೆ ಮುಂದೂಡಲಾಯಿತು.