ನವದೆಹಲಿ: 'ರಸ್ತೆ ಅಪಘಾತ ಪ್ರಕರಣಗಳಲ್ಲಿ ಸಾವುಗಳ ಸಂಖ್ಯೆ ಏರುತ್ತಿದೆ. ಜನರಿಗೆ ಕಾನೂನಿನ ಬಗ್ಗೆ ಭಯ ಅಥವಾ ಗೌರವ ಇಲ್ಲವಾಗಿದೆ' ಎಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
'ಅಪಘಾತಗಳಲ್ಲಿ ಸಾವಿನ ಸಂಖ್ಯೆ ತಗ್ಗಿಸಲು ಸರ್ಕಾರ ಶ್ರಮವಹಿಸುತ್ತಿದೆ. ರಸ್ತೆ ನಿರ್ವಹಣೆ, ವಾಹನಗಳ ನಿರ್ವಹಣೆ, ಕಾನೂನು ಜಾರಿ ಮತ್ತು ಜನ ಜಾಗೃತಿಯಿಂದ ಮಾತ್ರ ಇದು ಸಾಧ್ಯ' ಎಂದು ಹೇಳಿದರು.
'ಈ ಸಮಾಜದ ಅತಿದೊಡ್ಡ ಸಮಸ್ಯೆ ಎಂದರೆ ಕಾನೂನಿನ ಬಗ್ಗೆ ಗೌರವ ಅಥವಾ ಭೀತಿ ಇಲ್ಲದಿರುವುದು. ಹೆಲ್ಮೆಟ್ ಧರಿಸುವುದಿಲ್ಲ, ರೆಡ್ ಸಿಗ್ನಲ್ ಕಂಡರೂ ವಾಹನ ನಿಲ್ಲಿಸುವುದಿಲ್ಲ' ಎಂದು ಹೇಳಿದರು.
'ಹೆಲ್ಮೆಟ್ ಧರಿಸದ ಕಾರಣಕ್ಕೆ 30 ಸಾವಿರ ಜನರು ಸತ್ತಿದ್ದಾರೆ. ಮಹಾರಾಷ್ಟ್ರದಲ್ಲಿ ಪ್ರತಿಪಕ್ಷದ ನಾಯಕನಾಗಿದ್ದಾಗ ನಾನೇ ಸ್ವತಃ ಅಪಘಾತಕ್ಕೆ ಗುರಿಯಾಗಿದ್ದೆ. ಕಾಲಿಗೆ ನಾಲ್ಕು ಕಡೆ ತೀವ್ರ ಪೆಟ್ಟಾಗಿತ್ತು' ಎಂದು ಗಡ್ಕರಿ ಹೇಳಿದರು.
'ರಸ್ತೆ ಸಂಚಾರ ನಿಯಮಗಳನ್ನು ಪಾಲಿಸದ, ಅನುಷ್ಠಾನಗೊಳ್ಳದ ಕಾರಣಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಅಪಘಾತಗಳು ಸಂಭವಿಸುತ್ತಿವೆ. ನಿಯಂತ್ರಣಕ್ಕಾಗಿ ಜನರ ಸಹಕಾರ ಹೆಚ್ಚು ಅಗತ್ಯ. ಸಾರ್ವಜನಿಕರು, ಮಾಧ್ಯಮಗಳ ಸಹಕಾರವಿಲ್ಲದೆ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವುದು ಕಷ್ಟ' ಎಂದು ಹೇಳಿದರು.
30,000 ಹೆಲ್ಮೆಟ್ ಧರಿಸದ ಕಾರಣಕ್ಕೆ ಮೃತಪಟ್ಟವರ ಸಂಖ್ಯೆ
1.68 ಲಕ್ಷ ಈ ವರ್ಷ ರಸ್ತೆ ಅಪಘಾತಗಳಲ್ಲಿ ಮೃತಪಟ್ಟವರ ಸಂಖ್ಯೆ
₹ 40,000 ಕೋಟಿ ಅಪಘಾತ ವಲಯಗಳಲ್ಲಿ ಮುಂಜಾಗ್ರತೆಗೆ ವ್ಯಯಿಸುವ ಮೊತ್ತ