ವಾಷಿಂಗ್ಟನ್: ಯುದ್ಧದ ಹೆಸರಲ್ಲಿ ನಡೆಯುತ್ತಿರುವ 'ಹತ್ಯಾಕಾಂಡ'ವನ್ನು ಕೊನೆಗೊಳಿಸಲು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮತ್ತು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್‌ಸ್ಕಿ ಅವರೊಂದಿಗೆ ಮಾತುಕತೆ ನಡೆಸುವುದಾಗಿ ಅಮೆರಿಕದ ಚುನಾಯಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ಹೇಳಿದ್ದಾರೆ.
ರಷ್ಯಾ ದಾಳಿಯ ವಿರುದ್ಧ ಹೋರಾಡಲು ಜೋ ಬೈಡನ್ ಆಡಳಿತವು ಉಕ್ರೇನ್‌ಗೆ ಭಾರಿ ಹಣಕಾಸಿನ ನೆರವು ನೀಡಿರುವುದನ್ನು ಟ್ರಂಪ್ ಕಟುವಾಗಿ ಟೀಕಿಸುತ್ತಾ ಬಂದಿದ್ದಾರೆ.
'ನಾವು ಈ ಯುದ್ಧವನ್ನು ನಿಲ್ಲಿಸಲೇಬೇಕು. ಅದಕ್ಕಾಗಿ ಪುಟಿನ್ ಮತ್ತು ಅವರ ಪ್ರತಿನಿಧಿಗಳು ಹಾಗೂ ಝೆಲೆನ್‌ಸ್ಕಿ ಮತ್ತು ಅವರ ಪ್ರತಿನಿಧಿಗಳ ಜತೆ ಮಾತುಕತೆ ನಡೆಸುತ್ತೇವೆ' ಎಂದು ಫ್ಲಾರಿಡಾದ ತಮ್ಮ ನಿವಾಸದಲ್ಲಿ ಅವರು ಮಾಧ್ಯಮದವರಿಗೆ ತಿಳಿಸಿದ್ದಾರೆ.
ಸಂಘರ್ಷವನ್ನು ಶೀಘ್ರವಾಗಿ ಕೊನೆಗೊಳಿಸಲು ಸಾಧ್ಯ ಎಂದು ಟ್ರಂಪ್ ಅವರು ಪದೇ ಪದೇ ಹೇಳಿಕೊಂಡಿದ್ದಾರೆ. ಆದರೆ, ಅದು ಹೇಗೆ ಎಂಬುದರ ಬಗ್ಗೆ ಹೆಚ್ಚಿನ ವಿವರಗಳನ್ನು ನೀಡಿಲ್ಲ.
'ತಕ್ಷಣದಲ್ಲೇ ಕದನ ವಿರಾಮ' ಘೋಷಣೆಯಾಗಬೇಕು ಎಂದು ಈ ತಿಂಗಳ ಆರಂಭದಲ್ಲಿ ಒತ್ತಾಯಿಸಿದ್ದ ಅವರು 'ಮಾತುಕತೆ ಪ್ರಾರಂಭವಾಗಬೇಕು' ಎಂದಿದ್ದರು.