ನವದೆಹಲಿ: ಚೀನಾ ಮತ್ತು ಭಾರತದ ನಡುವಣ ಸಂಬಂಧದ ಬಗ್ಗೆ ಸಂಸತ್ ಅಧಿವೇಶನದಲ್ಲಿ ಚರ್ಚೆಗೆ ಅವಕಾಶ ನೀಡಬೇಕೆಂದು ಕಾಂಗ್ರೆಸ್ ಭಾನುವಾರ ಒತ್ತಾಯಿಸಿದೆ.
ಭಾರತ-ಚೀನಾ ಬಾಂಧವ್ಯದ ಬಗ್ಗೆ ಸಂಸತ್ತಿನಲ್ಲಿ ಸರ್ಕಾರ ನೀಡಿರುವ ಹೇಳಿಕೆ ಬಗ್ಗೆ ಟೀಕಿಸಿರುವ ಕಾಂಗ್ರೆಸ್, 2020ರಲ್ಲಿ ಚೀನಾ ಏಕಪಕ್ಷೀಯವಾಗಿ ಬಿಕ್ಕಟ್ಟು ಸೃಷ್ಟಿಸಿದ ನಂತರದ ಪರಿಸ್ಥಿತಿಯನ್ನು ಮೋದಿ ಸರ್ಕಾರವು ಒಪ್ಪಿಕೊಂಡಂತಿದೆ ಎಂದು ಹೇಳಿದೆ.
'ಕಾರ್ಯತಂತ್ರ ಮತ್ತು ಆರ್ಥಿಕ ನೀತಿಗಳನ್ನು ಕೇಂದ್ರೀಕರಿಸಿ, ಭಾರತ-ಚೀನಾ ಸಂಬಂಧದ ಬಗ್ಗೆ ಸಂಸತ್ತಿನಲ್ಲಿ ಚರ್ಚೆ ನಡೆಯಬೇಕು. ಗಡಿ ಪರಿಸ್ಥಿತಿಯನ್ನು ನಾಲ್ಕು ವರ್ಷಗಳ ಹಿಂದೆ ಚೀನಾ ಏಕಪಕ್ಷೀಯವಾಗಿ ಬದಲಾಯಿಸಿದ್ದರೂ, ಚೀನಾದ ಮೇಲಿನ ನಮ್ಮ ಅವಲಂಬನೆ ಹೆಚ್ಚಾಗುತ್ತಲೇ ಇದೆ' ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಹೇಳಿದ್ದಾರೆ.
ಭಾರತ ಮತ್ತು ಚೀನಾ ಸಂಬಂಧದ ಬಗ್ಗೆ ವಿದೇಶಾಂಗ ಸಚಿವ ಜೈಶಂಕರ್ ಅವರು ಉಭಯ ಸದನಗಳಲ್ಲಿ ನೀಡಿರುವ ಹೇಳಿಕೆಯ ಬಗ್ಗೆ ಕಾಂಗ್ರೆಸ್ ಅಧ್ಯಯನ ಮಾಡಿದೆ. ಸಂಸದರು ಯಾವುದೇ ಪ್ರತಿಕ್ರಿಯೆ ನೀಡಲು ಮೋದಿ ಸರ್ಕಾರ ಅನುಮತಿ ನೀಡದೇಹೋದದ್ದು ದುರದೃಷ್ಟಕರ ಎಂದೂ ಪ್ರತಿಕ್ರಿಯಿಸಿದ್ದಾರೆ.
Cut-off box - ಕಾಂಗ್ರೆಸ್‌ನ ಪ್ರಶ್ನೆಗಳು * ಗ್ಯಾಲ್ವನ್ ಕಣಿವೆಯಲ್ಲಿ ಜೂನ್ 20ರಂದು ನಡೆದ ಘರ್ಷಣೆಗೆ ಕಾರಣ ಏನೆಂದು ಸದನಕ್ಕೆ ತಿಳಿದಿದೆ. ನಮ್ಮ ಗಡಿಯೊಳಗೆ ಯಾರೂ ನುಗ್ಗಿಲ್ಲ ಎನ್ನುವ ಮೂಲಕ ಸರ್ಕಾರವು ಚೀನಾಕ್ಕೆ 'ಕ್ಲೀನ್ ಚಿಟ್' ನೀಡಿತ್ತು. ಇದರಿಂದ ನಮ್ಮ ಹುತಾತ್ಮ ಸೈನಿಕರಿಗೆ ಅವಮಾನವಾಗಿದ್ದು ಮಾತ್ರವಲ್ಲದೇ ಭಾರತದ ಮುಂದಿನ ಮಾತಕತೆಯನ್ನು ದುರ್ಬಲಗೊಳಿಸಿತು. ಯಾವ ಉದ್ದೇಶದಿಂದ ಪ್ರಧಾನಿ ಆ ಹೇಳಿಕೆ ನೀಡಿದ್ದರು? * ಸೇನಾ ಮುಖ್ಯಸ್ಥರಾಗಿರುವ ಜನರಲ್ ಉಪೇಂದ್ರ ದ್ವಿವೇದಿ ಅವರು ಇಂಡಿಯಾದ ದೀರ್ಘಕಾಲದ ನಿಲುವನ್ನು ಅ.22ರಂದು ಪುನರುಚ್ಚರಿಸಿದ್ದರು. ಏಪ್ರಿಲ್ 20ರ ಬಿಕ್ಕಟ್ಟಿಗಿಂತ ಹಿಂದೆ ಇದ್ದ ಪರಿಸ್ಥಿತಿಗೆ ಮರಳಲು ಬಯಸುತ್ತೇವೆ ಎಂದು ಹೇಳಿದ್ದರು. ಚೀನಾ-ಭಾರತ ಗಡಿ ವ್ಯವಹಾರಗಳ ಸಂಬಂಧ ನಡೆದಿದ್ದ 32ನೇ ಸಭೆಯಲ್ಲಿ ವಿದೇಶಾಂಗ ಇಲಾಖೆಯು '2020 ಬಿಕ್ಕಟ್ಟಿನ ಪರಿಹಾರಕ್ಕಾಗಿ ರೂಪಿಸಿದ್ದ ಒಪ್ಪಂದದ ಬಗ್ಗೆ ಇತ್ತೀಚೆಗೆ ಎರಡು ದೇಶಗಳು ದೃಢಪಡಿಸಿದ್ದವು' ಎಂದು ಹೇಳಿತ್ತು. ಹಾಗಾದರೆ 'ದನಗಾಹಿಗಳಿಗೆ ಹಿಂದಿನಂತೆ ಗಡಿ ಭಾಗದಲ್ಲಿ ದನ ಮೇಯಿಸುವ ಹಕ್ಕನ್ನು ನೀಡಲಾಗಿದೆಯೇ? *ನಮ್ಮ ಸಾಂಪ್ರದಾಯಿಕ ಗಸ್ತು ಕೇಂದ್ರಗಳಿಗೆ ಮುಕ್ತ ಪ್ರವೇಶ ಇದೆಯೇ? * ಹಿಂದಿನ ಮಾತುಕತೆಗಳ ಸಮಯದಲ್ಲಿ ಬಿಟ್ಟುಕೊಟ್ಟಿರುವ ಬಫರ್ ವಲಯಗಳನ್ನು ಭಾರತ ಮರಳಿ ಪಡೆದುಕೊಂಡಿದೆಯೆ? * ಡೆಪ್ಸಾಂಗ್ ಮತ್ತು ಡೆಮ್ಚೋಕ್‌ನಲ್ಲಿನ ಪರಿಸ್ಥಿತಿ ಬಗ್ಗೆ ಚೀನಾ ಸರ್ಕಾರ ಯಾಕೆ ದೃಢಪಡಿಸಿಲ್ಲ?