ನವದೆಹಲಿ: ಸೈಬರ್ ಅಪರಾಧಗಳು ಮತ್ತು ಹವಾಮಾನ ಬದಲಾವಣೆಯು ಮಾನವ ಹಕ್ಕುಗಳ ಹೊಸ ಬೆದರಿಕೆಗಳಾಗಿವೆ ಎಂದು ರಾಷ್ಟ್ರಪತಿ ದ್ರೌಪದಿ ಮುರ್ಮು ಹೇಳಿದ್ದಾರೆ.
'ಮಾನವ ಹಕ್ಕುಗಳ ದಿನ'ದ ಪ್ರಯುಕ್ತ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದ್ದಾರೆ.
'ಇದುವರೆಗಿನ ಮಾನವ ಹಕ್ಕುಗಳ ಚರ್ಚೆಯು ಮಾನವನ ಮೇಲೆ ಕೇಂದ್ರೀಕೃತವಾಗಿತ್ತು. ಏಕೆಂದರೆ, ಹಕ್ಕುಗಳನ್ನು ಉಲ್ಲಂಘಿಸುವವರನ್ನು 'ಮಾನವ' ಎಂದು ಭಾವಿಸಲಾಗುತ್ತಿತ್ತು. ಆದರೆ, ಈಗ ಕೃತಕ ಬುದ್ಧಿಮತ್ತೆ (ಎಐ) ಸೇರಿ ಡಿಜಿಟಲ್ ತಂತ್ರಜ್ಞಾನ ನಮ್ಮ ಜೀವನದಲ್ಲಿ ಪ್ರವೇಶಿಸಿದೆ. ಹಾಗಾಗಿ ಅಪರಾಧಿ ಮಾನವನಲ್ಲ, ಬದಲಾಗಿ ಬುದ್ಧಿವಂತ ಏಜೆಂಟ್ ಆಗಿರಬಹುದು ಎಂದು ಭಾವಿಸಲಾಗುತ್ತದೆ ಎಂದಿದ್ದಾರೆ.
ನಾವು ಭವಿಷ್ಯದಲ್ಲಿ ಪ್ರಗತಿ ಸಾಧಿಸುವುದರ ಜತೆಗೆ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಡಿಜಿಟಲ್ ಯುಗವು ರೂಪಾಂತರಗೊಳ್ಳುತ್ತಿರುವಾಗ ಸೈಬರ್ ಬೆದರಿಕೆ, ನಕಲು ಮಾಡುವಿಕೆ, ತಪ್ಪು ಮಾಹಿತಿ ಹರಡುವಿಕೆಯಂತಹ ಸಂಕೀರ್ಣ ಸಮಸ್ಯೆಗಳು ಎದುರಾಗುತ್ತವೆ ಎಂದು ಅವರು ತಿಳಿಸಿದ್ದಾರೆ.
ಈ ಸವಾಲುಗಳು ಪ್ರತಿಯೊಬ್ಬ ವ್ಯಕ್ತಿಯ ಹಕ್ಕುಗಳು ಮತ್ತು ಘನತೆಯನ್ನು ರಕ್ಷಿಸುವ ಸುರಕ್ಷಿತ ಮತ್ತು ಸಮಾನ ಡಿಜಿಟಲ್ ಪರಿಸರವನ್ನು ಬೆಳೆಸುವ ಪ್ರಾಮುಖ್ಯತೆಯನ್ನು ಒತ್ತಿಹೇಳುತ್ತವೆ ಎಂದು ಅವರು ಪ್ರತಿಪಾದಿಸಿದ್ದಾರೆ.
ಕೃತಕ ಬುದ್ಧಿಮತ್ತೆಯು (ಎಐ) ಈಗ ನಮ್ಮ ದೈನಂದಿನ ಜೀವನವನ್ನು ಪ್ರವೇಶಿಸಿದೆ. ಅನೇಕ ಸಮಸ್ಯೆಗಳನ್ನು ಪರಿಹರಿಸುವುದರ ಜತೆಗೆ ಹಲವಾರು ಹೊಸ ಸಮಸ್ಯೆಗಳಿಗೂ ನಾಂದಿ ಹಾಡುತ್ತಿದೆ ಎಂದು ತಿಳಿಸಿದ್ದಾರೆ.
ಹವಾಮಾನ ಬದಲಾವಣೆಯು ಜಾಗತಿಕ ಮಟ್ಟದಲ್ಲಿ ಮಾನವ ಹಕ್ಕುಗಳ ಚಿಂತನೆಯನ್ನು ಪರಿಶೀಲಿಸಲು ನಮ್ಮನ್ನು ಒತ್ತಾಯಿಸುತ್ತದೆ ಎಂದೂ ಹೇಳಿದ್ದಾರೆ.
ಪ್ರತಿ ವರ್ಷ ಡಿಸೆಂಬರ್ 10ರಂದು 'ಮಾನವ ಹಕ್ಕುಗಳ ದಿನ'ವನ್ನಾಗಿ ಆಚರಿಸಲಾಗುತ್ತದೆ. ಇದನ್ನು 1948ರಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಿತ್ತು. ಈ ದಿನವನ್ನು ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆ (ಯುಡಿಎಚ್‌ಆರ್) ಸ್ಮರಣಾರ್ಥ ಎಂದೂ ಆಚರಿಸಲಾಗುತ್ತದೆ.