ಢಾಕಾ: 'ವಿಜಯ ದಿವಸ'ದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಹಂಚಿಕೊಂಡಿದ್ದ ಪೋಸ್ಟ್ ಅನ್ನು ಟೀಕಿಸಿ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಕಾನೂನು ಸಲಹೆಗಾರ ಆಸಿಫ್ ನಜರೂಲ್ ಅವರು ಪೋಸ್ಟ್ ಮಾಡಿದ್ದಾರೆ. 'ಈ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಹೋರಾಡಲು ಭಾರತವು ನಮ್ಮ ಹೋರಾಟದಲ್ಲಿ ಭಾಗಿಯಾಗಿತ್ತಷ್ಟೆ.
ಇದಕ್ಕಿಂತ ಹೆಚ್ಚಿನದು ಏನೂ ಇಲ್ಲ' ಎಂದಿದ್ದಾರೆ.
ನಜರೂಲ್ ಅವರ ಪೋಸ್ಟ್ ಅನ್ನು ಮಧ್ಯಂತರ ಸರ್ಕಾರದ ಮುಖ್ಯಸ್ಥ ಮೊಹಮ್ಮದ್ ಯೂನುಸ್ ಅವರೂ ಹಂಚಿಕೊಂಡಿದ್ದಾರೆ. ಪಾಕಿಸ್ತಾನ ಸೇನೆಯು ಭಾರತದ ಸೇನೆಯ ಮುಂದೆ 1971ರ ಡಿ.16ರಂದು ಶರಣಾಗತಿಯಾಗಿತ್ತು. ಈ ಬಳಿಕ ಬಾಂಗ್ಲಾದೇಶವು ಸ್ವಾತಂತ್ರ್ಯಗೊಂಡಿತು. ಈ ನಂತರದಿಂದ ಡಿ.16 ಅನ್ನು 'ವಿಜಯ ದಿವಸ'ವನ್ನಾಗಿ ಆಚರಿಸಲಾಗುತ್ತಿದೆ.
ವಿದ್ಯಾರ್ಥಿ ಚಳವಳಿಯ ಸಂಚಾಲಕ ಹಸ್ನತ್ ಅಬ್ದುಲ್ಲಾ ಅವರೂ ಪ್ರಧಾನಿ ಮೋದಿ ಅವರ ಪೋಸ್ಟ್‌ಗೆ ವಿರೋಧ ವ್ಯಕ್ತಪಡಿಸಿದ್ದಾರೆ. 'ಇದು ಬಾಂಗ್ಲಾದೇಶದ ಸ್ವಾತಂತ್ರ್ಯಕ್ಕಾಗಿ ನಡೆದ ಯುದ್ಧವಾಗಿದೆ. ಮೋದಿ ಅವರು ಇದೊಂದು ಭಾರತದ ಯುದ್ಧ ಎಂಬಂತೆ, ಇದು ಭಾರತದ ಗೆಲುವು ಎಂಬಂತೆ ಹೇಳಿಕೊಂಡಿದ್ದಾರೆ. ತಮ್ಮ ಈ ಹೇಳಿಕೆಯ ಮೂಲಕ ಬಾಂಗ್ಲಾದೇಶದ ಅಸ್ತಿತ್ವವನ್ನು ಅಗೌರವದಿಂದ ನೋಡಿದಂತಾಗಿದೆ' ಎಂದಿದ್ದಾರೆ.
'ನಾವು ಸ್ವಾತಂತ್ರ್ಯ ಪಡೆದುಕೊಂಡಿದ್ದನ್ನು ತಮ್ಮ ಸಾಧನೆ ಎಂದು ಭಾರತವು ಹೇಳಿಕೊಳ್ಳುತ್ತಿದೆ. ಇದು ನಮ್ಮ ಸ್ವಾತಂತ್ರ್ಯಕ್ಕೆ, ಸಾರ್ವಭೌಮತ್ವಕ್ಕೆ, ಏಕತೆಗೆ ಒಡ್ಡುತ್ತಿರುವ ಬೆದರಿಕೆ ಎಂದೇ ನಾವು ನೋಡಬೇಕಾಗುತ್ತದೆ. ಭಾರತದ ಈ ಬೆದರಿಕೆಯ ವಿರುದ್ಧ ಹೋರಾಡುವುದು ಅಗತ್ಯವಾಗಿದೆ. ನಾವು ಹೋರಾಟವನ್ನು ಮಾಡಬೇಕಿದೆ' ಎಂದು ಬರೆದುಕೊಂಡಿದ್ದಾರೆ.