ನವದೆಹಲಿ: ರಸ್ತೆ ಅಪಘಾತದ ಕಾರಣದಿಂದಾಗಿ ಬೌದ್ಧಿಕವಾಗಿ ಶೇಕಡ 75ರಷ್ಟು ವೈಕಲ್ಯಕ್ಕೆ ತುತ್ತಾಗಿರುವ ಬಾಲಕಿಯೊಬ್ಬಳಿಗೆ ನೀಡಬೇಕಿರುವ ಪರಿಹಾರದ ಮೊತ್ತವು ₹11.51 ಲಕ್ಷ ಇದ್ದಿದ್ದನ್ನು ಸುಪ್ರೀಂ ಕೋರ್ಟ್ ಬುಧವಾರ ₹50.87 ಲಕ್ಷಕ್ಕೆ ಹೆಚ್ಚುಮಾಡಿದೆ.
ಬಾಲಕಿ ಸಾಕ್ಷಿ ಗ್ರಿಯೋಲಾ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಬಿ.ಆರ್.
ಗವಾಯಿ ಮತ್ತು ಕೆ.ವಿ. ವಿಶ್ವನಾಥನ್ ಅವರು ಇರುವ ವಿಭಾಗೀಯ ಪೀಠವು ಈ ತೀರ್ಪು ನೀಡಿದೆ.
ಬಾಲಕಿ ಸಾಕ್ಷಿ ತನ್ನ ಬಾಲ್ಯವನ್ನು ಮಾತ್ರವಲ್ಲದೆ ಹರೆಯದ ಬದುಕನ್ನೂ ಕಳೆದುಕೊಂಡಿದ್ದಾಳೆ ಎಂದು ಪೀಠವು ಬೇಸರ ವ್ಯಕ್ತಪಡಿಸಿದೆ. 'ಈ ಪ್ರಕರಣದಲ್ಲಿ ಮೇಲ್ಮನವಿ ಸಲ್ಲಿಸಿರುವ ವ್ಯಕ್ತಿಗೆ ಸಂತಾನಶಕ್ತಿ ಇದೆಯಾದರೂ, ಆಕೆ ಮಕ್ಕಳನ್ನು ಬೆಳೆಸುವುದು ಬಹುತೇಕ ಸಾಧ್ಯವಿಲ್ಲ. ವೈವಾಹಿಕ ಬದುಕಿನ ಸಣ್ಣ ಖುಷಿಯನ್ನೂ ಆಕೆ ಅನುಭವಿಸಲಾರಳು' ಎಂದು ಪೀಠವು ಹೇಳಿದೆ.
'ಆಕೆಯು ತನ್ನ ಜೀವಿತಾವಧಿಯ ಉದ್ದಕ್ಕೂ ಇನ್ನೊಬ್ಬ ವ್ಯಕ್ತಿಯ ಮೇಲೆ ಅವಲಂಬಿತಳಾಗಿರುತ್ತಾಳೆ. ಆಕೆಯ ದೇಹಕ್ಕೆ ವಯಸ್ಸು ಆಗುತ್ತಿರುತ್ತದೆಯಾದರೂ, ಮನಸ್ಸಿನ ವಯಸ್ಸು ಎರಡನೆಯ ತರಗತಿಯಲ್ಲಿ ಓದುವ ಮಗುವಿನ ವಯಸ್ಸಾಗಿಯೇ ಉಳಿದಿರುತ್ತದೆ. ಅಂದರೆ, ದೇಹ ಬೆಳೆದರೂ, ಆಕೆ ಸಣ್ಣ ಮಗುವಾಗಿಯೇ ಇರುತ್ತಾಳೆ' ಎಂದು ಪೀಠವು ಹೇಳಿದೆ.
2009ರಲ್ಲಿ ಅಪಘಾತ ಸಂಭವಿಸಿದಾಗ ಸಾಕ್ಷಿಗೆ ಏಳು ವರ್ಷ ವಯಸ್ಸಾಗಿತ್ತು. ಆಕೆಯ ಕುಟುಂಬವು ಈಗಿನ ಹಾಗೂ ಮುಂದೆ ಬರಬಹುದಾದ ವೈದ್ಯಕೀಯ ವೆಚ್ಚಗಳನ್ನು ನಿಭಾಯಿಸಲು ಹಣಕಾಸಿನ ದೃಷ್ಟಿಯಿಂದ ಸಜ್ಜಾಗಬೇಕಿದೆ ಎಂದು ಅದು ಹೇಳಿದೆ.