ಪೆರ್ಲ: ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಪೆರ್ಲ ಪೇಟೆಯಲ್ಲಿ ಭಾನುವಾರ ಬೆಳಗಿನ ಜಾವ ವಾಣಿಜ್ಯ ಸಂಕೀರ್ಣದಲ್ಲಿ ಉಂಟಾಗಿರುವ ಬೆಂಕಿ ಆಕಸ್ಮಿಕದಿಂದ ಆರಕ್ಕೂ ಹೆಚ್ಚು ವ್ಯಾಪಾರಿ ಸಂಸ್ಥೆಗಳು ಉರಿದು ನಾಶಗೊಂಡಿದೆ. ಇದರಿಂದ ಲಕ್ಷಾಂತರ ರೂ. ನಷ್ಟ ಸಂಭವಿಸಿದೆ. ವಿದ್ಯುತ್ ಶಾರ್ಟ್ ಸಕ್ರ್ಯೂಟ್ ಬೆಂಕಿ ಆಕಸ್ಮಿಕಕ್ಕೆ ಕಾರಣವೆಂದು ಸಂಶಯಿಸಲಾಗಿದೆ.
ಬೆಳಗಿನ ಜಾವ 12ರಿಂದ 1ಗಂಟೆ ಅವಧಿಯಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಕ್ಷಣಾರ್ಧದಲ್ಲಿ ಸಂಪೂರ್ಣ ಕಟ್ಟಡವನ್ನು ಆವರಿಸಿದೆ. ತಕ್ಷಣ ಸ್ಥಳೀಯರು ನೀಡಿದ ಮಾಹಿತಿಯನ್ವಯ ಉಪ್ಪಳ, ಕಾಸರಗೋಡಿನಿಂದ ಆರು ಅಗ್ನಿಶಾಮಕ ದಳ ವಾಹನಗಳು ತಾಸುಗಳ ಕಾಳ ನಡೆಸಿದ ಕಾರ್ಯಾಚರಣೆಯಿಂದ ಬೆಂಕಿ ಶಮನಗೊಳಿಸಿದ್ದರೂ, ಕಟ್ಟಡ ಸಂಪೂರ್ಣ ಉರಿದು ನಾಶಗೊಂಡಿತ್ತು.
ಬೆಂಕಿಗಾಹುತಿಯಾದ ವಾಣಿಜ್ಯ ಸಂಸ್ಥೆಗಳೆಲ್ಲವೂ ಪೆರ್ಲದ ಹೃದಯಭಾಗದಲ್ಲಿರುವ ಹಳೇ ಹೆಂಚಿನ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿದ್ದು, ಹೆಚ್ಚಿನ ವ್ಯವಹಾರ ನಡೆಯುತ್ತಿದ್ದ ಕೇಂದ್ರ ಇದಾಗಿತ್ತು. ಶೇಣಿ ನಿವಾಸಿ ನಾರಾಯಣ ಪೂಜಾರಿ ಮಾಲಿಕತ್ವದಲ್ಲಿರುವ ಪೂಜಾ ಫ್ಯಾನ್ಸಿ, ಪೆರ್ಲ ನಿವಾಸಿ ಮೋನು ಎಂಬವರ ತರಕಾರಿ ಅಂಗಡಿ, ಪತ್ರಿಕಾ ವಿತರಕ ಹಾಗೂ ಬಟ್ಟೆ ಅಂಗಡಿ ವ್ಯಾಪಾರಿ ಗೋಪಿನಾಥ ಪೈ ಅವರ ಮಾಲಿಕತ್ವದ ಗೋಪಿಕಾ ಸ್ಟೋರ್, ಜಯದೇವ ಬಾಳಿಗ ಅವರ ಗೌತಮ್ ಕೋಲ್ಡ್ ಹೌಸ್, ಮೊಹಮ್ಮದ್ ಎಂಬವರ ಸಾದತ್ ಜನರಲ್ ಸ್ಟೋರ್, ಅಮೆಕ್ಕಳ ನಿವಾಸಿ ಪ್ರವೀಣ್ ಪೈ ಮಾಲಿಕತ್ವದ ಪ್ರವೀಣ್ ಆಟೋ ಮೊಬೈಲ್ಸ್, ಸಂಜೀವ ನಾಯ್ಕ್ ಬಜಕೂಡ್ಲು ಎಂಬವರ ಕಬ್ಬಿನ ಹಾಲಿನ ಅಂಗಡಿ ಬೆಂಕಿಗೆ ಅಹುತಿಯಾಗಿದೆ. ಬಹುತೇಕ ವ್ಯಾಪಾರಿಗಳ ದಾಖಲೆಗಳು ಸುಟ್ಟು ಹಾನಿಗೊಂಡಿದೆ. ತರಕಾರಿ ವ್ಯಾಪಾರಿಯೊಬ್ಬರ ಅಂಗಡಿಯಲ್ಲಿರಿಸಲಾಗಿದ್ದ ಅವರ ಜಾಗಕ್ಕೆ ಸಂಬಂಧಿಸಿದ ದಾಖಲೆಯೂ ಉರಿದು ನಾಶಗೊಂಡಿತ್ತೆನ್ನಲಾಗಿದೆ. ನಷ್ಟದ ಮೊತ್ತ ಹಲವು ಕೋಟಿ ಮೀರಿರುವುದಾಗಿ ಲೆಕ್ಕಹಾಕಲಾಗಿದೆ.
ಕ್ರಿಕೆಟ್ ಆಟಗಾರರಿಂದ ಮಾಹಿತಿ:
ಪೆರ್ಲ ಸನಿಹದ ಬಜಕೂಡ್ಲು ಮಿನಿ ಸ್ಟೇಡಿಯಂನಲ್ಲಿ ನಡೆಯುತ್ತಿದ್ದ ಕ್ರಿಕೆಟ್ ಪಂದ್ಯಾಟದಲ್ಲಿ ಪಾಲ್ಗೊಂಡಿದ್ದವರಿಂದ ಬೆಂಕಿ ಆಕಸ್ಮಿಕದ ಬಗ್ಗೆ ಮಾಹಿತಿ ಹೊರಜಗತ್ತಿಗೆ ಲಭಿಸಿದೆ. ವಾಹನದಲ್ಲಿ ಸಂಚರಿಸುತ್ತಿದ್ದವರಿಗೆ ಕಟ್ಟಡವೊಂದರ ಹೊರಭಾಗದಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ತಕ್ಷಣ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳ ವಾಹನ ಆಗಮಿಸುತ್ತಿದ್ದಂತೆ ಕಟ್ಟಡ ಬಹುತೇಕ ಉರಿದು ನಾಶಗೊಂಡಿದ್ದು, ಇತರ ಕಟ್ಟಡಗಳಿಗೆ ಬೆಂಕಿ ವ್ಯಾಪಿಸುವುದನ್ನು ಅಗ್ನಿಶಾಮಕ ದಳ ತಡೆದಿದೆ. ಬೆಂಕಿ ಕಾಣಿಸಿಕೊಂಡ ಕ್ಷಣಾರ್ಧದಲ್ಲಿ ಬೆಂಕಿಯ ಕೆನ್ನಾಲಿಗೆ ಇಡೀ ಕಟ್ಟಡವನ್ನು ಆವರಿಸಿದೆ.
ಎಣ್ಮಕಜೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಸೋಮಶೇಖರ್ ಜೆ.ಎಸ್, ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಪದಾಧಿಕಾರಿಗಳು, ಜನಪ್ರತಿನಿಧಿಗಳು, ಬದಿಯಡ್ಕ ಠಾಣೆ ಪೊಲೀಸರು, ಪೆರ್ಲ, ಬಜಕೂಡ್ಲು ಆಸುಪಾಸಿನ ನಾಗರಿಕರು ರಕ್ಷಣಾ ಕಾರ್ಯಕ್ಕೆ ನೇತೃತ್ವ ನೀಡಿದ್ದರು.
ಕಟ್ಟಡ ಸ್ಥಳದ ಬಗ್ಗೆ ವ್ಯಾಜ್ಯ:
ಪ್ರಸಕ್ತ ಕಟ್ಟಡ ಹೊಂದಿರುವ ಜಾಗಕ್ಕೆ ಸಂಬಂಧಿಸಿ ವ್ಯಾಜ್ಯವೊಂದು ದೀರ್ಘ ಕಾಲದಿಂದ ನ್ಯಾಯಾಲಯದಲ್ಲಿದ್ದು, ಪ್ರಕರಣ ಜಾರಿಯಲ್ಲಿರುವಂತೆ ಕಟ್ಟಡ ಬೆಂಕಿಗಾಹುತಿಯಾಗಿದೆ. ಅಗ್ನಿಶಾಮಕದಳ ಸ್ಥಳಕ್ಕಾಗಮಿಸುವ ಸಂದರ್ಭ ಉಂಟಾಗಿರುವ ವಿಳಂಬದಿಂದ ಮತ್ತಷ್ಟು ಹಾನಿ ನಡೆದಿದೆ. ಬದಿಯಡ್ಕದಲ್ಲಿ ಅಗ್ನಿಶಾಮಕ ಘಟಕ ಅರಂಭಿಸುವಂತೆ ನಾಗರಿಕರ ದೀರ್ಘ ಕಾಲದ ಬೇಡಿಕೆಗೆ ಸರ್ಕಾರ ಸ್ಪಂದಿಸದಿರುವುದರಿಂದ ಪೆರ್ಲ, ಚವರ್ಕಾಡು, ಏತಡ್ಕ ಸೇರಿದಂತೆ ಗ್ರಾಮೀಣ ಪ್ರದೇಶದಲ್ಲಿ ಉಂಟಾಗುವ ಇಂತಹ ದುರ್ಘಟನೆಗಳಿಗೆ ಜನಸಾಮಾನ್ಯರು ಬೆಲೆ ತೆರಬೇಕಾಗಿಬಂದಿದೆ.