ಭೋಪಾಲ್: ಮಧ್ಯಪ್ರದೇಶದ ಗುಣಾ ಜಿಲ್ಲೆಯಲ್ಲಿ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಮೃತಪಟ್ಟಿದ್ದಾನೆ.
ಸುಮಿತ್ ಮೀನಾ (10) ಮೃತ ಬಾಲಕ. ಈತ ಪಿಪಲಿಯಾ ಗ್ರಾಮದಲ್ಲಿ ಶನಿವಾರ ಸಂಜೆ ಐದು ಗಂಟೆ ಸುಮಾರಿಗೆ ಆಕಸ್ಮಿಕವಾಗಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದನು.
140 ಅಡಿ ಆಳದ ಕೊಳವೆ ಬಾವಿಗೆ ಬಿದ್ದಿದ್ದ ಬಾಲಕನ ರಕ್ಷಣೆಗೆ ಸತತ 16 ಗಂಟೆಗಳ ಕಾಲ ನಡೆಸಿದ ರಕ್ಷಣಾ ಕಾರ್ಯಾಚರಣೆ ಕಡೆಗೂ ಯಶಸ್ವಿಯಾಗಲಿಲ್ಲ.
ಬಾಲಕನನ್ನು ಕೊಳವೆ ಬಾವಿಯಿಂದ ಭಾನುವಾರ ಬೆಳಿಗ್ಗೆ ಹೊರತೆಗೆಯಲಾಯಿತು. ತಕ್ಷಣವೇ ಜೀವ ರಕ್ಷಕ ಸಾಮಾಗ್ರಿಯ ಬೆಂಬಲದೊಂದಿಗೆ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ಬಾಲಕನ ಸಾವನ್ನು ದೃಢೀಕರಿಸಿದ್ದಾರೆ' ಎಂದು ಗುಣಾ ಎಸ್‌ಪಿ ಸಂಜೀವ್ ಸಿನ್ಹಾ ತಿಳಿಸಿದ್ದಾರೆ.
ಕೊಳವೆ ಬಾವಿಯ ಸುಮಾರು 39 ಅಡಿ ಆಳದಲ್ಲಿ ಬಾಲಕ ಸಿಲುಕಿಕೊಂಡಿದ್ದನು. ಭೋಪಾಲ್‌ನಿಂದ ಧಾವಿಸಿದ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ರಾತ್ರಿಯಿಡೀ ರಕ್ಷಣಾ ಕಾರ್ಯಾಚರಣೆ ನಡೆಸಿದರೂ ಬಾಲಕನ ಪ್ರಾಣ ಉಳಿಸಲು ಸಾಧ್ಯವಾಗಲಿಲ್ಲ.
ಭೋಪಾಲ್: ಕೊಳವೆ ಬಾವಿಗೆ ಬಿದ್ದಿದ್ದ ಬಾಲಕ ಸಾವು