ಚೆನ್ನೈ: 'ಫೆಂಜಲ್' ಚಂಡಮಾರುತದಿಂದ ತತ್ತರಿಸಿದ ಬದುಕು... ದ್ವೀಪದಂತಾದ ಗ್ರಾಮಗಳು... ತಲುಪದ ಅಗತ್ಯ ವಸ್ತುಗಳು... ವಿಲ್ಲುಪುರಂ ಜಿಲ್ಲೆಯ ಹಲವು ಗ್ರಾಮಗಳಲ್ಲಿನ ಸಂತ್ರಸ್ತರ ಎರಡು ದಿನಗಳ ತಾಳ್ಮೆಯ ಕಟ್ಟೆಯು ಮಂಗಳವಾರ ಒಡೆಯಿತು. ಯೋಗಕ್ಷೇಮ ವಿಚಾರಿಸಲು ಬಂದ ಸಚಿವರಿಗೆ ಕೆಸರು ಎರೆಚುವುದರ ಮೂಲಕ ಸಂತ್ರಸ್ತರು ತಮ್ಮ ಆಕ್ರೋಶ ಹೊರಹಾಕಿದರು.
ಮಳೆಯಿಂದ ಅರಸೂರ್ ಹಾಗೂ ಇರುವೇಲ್‌ಪಟ್ಟು ಗ್ರಾಮಗಳು ತೀವ್ರ ಹಾನಿಗೆ ಒಳಗಾಗಿವೆ. ಈ ಗ್ರಾಮಗಳಿಗೆ ಭೇಟಿ ನೀಡಿದ ಅರಣ್ಯ ಸಚಿವ ಕೆ. ಪೊನ್ಮುಡಿ ಹಾಗೂ ವಿಲ್ಲುಪುರಂ ಜಿಲ್ಲೆಯ ಇತರೆ ಅಧಿಕಾರಿಗಳು ಜನರ ಆಕ್ರೋಶಕ್ಕೆ ಗುರಿಯಾದರು. ಅಗತ್ಯವಸ್ತುಗಳು ದೊರಕದ ಕಾರಣ ಪ್ರವಾಹ ಪೀಡಿತ ಜಿಲ್ಲೆಗಳ ಹಲವು ಗ್ರಾಮಗಳಲ್ಲಿ ಜನರು ಪ್ರತಿಭಟನೆ ನಡೆಸಿದ್ದಾರೆ.
ಕಾರಿನಿಂದ ಇಳಿಯದ ಸಚಿವ: ಸಚಿವ ಪೊನ್ಮುಡಿ, ಅವರ ಮಗ ಹಾಗೂ ಮಾಜಿ ಸಂಸದ ಗೌತಮ್ ಸಿಂಗಮಣಿ, ಜಿಲ್ಲಾಧಿಕಾರಿ ಸಿ. ಪಳನಿ ಅವರು ಜನರ ಸಂಕಷ್ಟ ಆಲಿಸಲು ಗ್ರಾಮಗಳಿಗೆ ಭೇಟಿ ನೀಡಿದ್ದರು. ಜನರೊಂದಿಗೆ ಮಾತನಾಡುವ ವೇಳೆ ಸಚಿವ ಪೊನ್ಮುಡಿ ಸೇರಿದಂತೆ ಇತರೆ ಯಾವ ಅಧಿಕಾರಿಯೂ ಕಾರಿನಿಂದ ಇಳಿಯಲಿಲ್ಲ. ಇದರಿಂದ ಕುಪಿತಗೊಂಡ ಸಂತ್ರಸ್ತರು, ಕಾರಿನತ್ತ ಕೆಸರು ಎರಚಿದರು. ಈ ಬಳಿಕ ತಕ್ಷಣವೇ ಸಚಿವರು ಹಾಗೂ ಅಧಿಕಾರಿಗಳು ಸ್ಥಳದಿಂದ ತೆರಳಿದರು.
ಈ ಘಟನೆ ಕುರಿತು ತಮಿಳುನಾಡು ಘಟಕದ ಬಿಜೆಪಿ ಅಧ್ಯಕ್ಷ ಅಣ್ಣಾಮಲೈ ಅವರು ಪ್ರತಿಕ್ರಿಯಿಸಿದ್ದಾರೆ. 'ಈ ಘಟನೆಯು ಡಿಎಂಕೆ ಸರ್ಕಾರದ ಕುರಿತು ಜನರಲ್ಲಿ ಇರುವ ಆಕ್ರೋಶ ತೋರಿಸುತ್ತದೆ' ಎಂದಿದ್ದಾರೆ. ಈ ಘಟನೆಯನ್ನು 'ರಾಜಕೀಯ ಪ್ರೇರಿತ' ಎಂದು ಡಿಎಂಕೆ ಹೇಳಿದೆ.