ವೈಕಂ : ತಮಿಳುನಾಡು ಸರ್ಕಾರ ನೀಡುವ 2024ನೇ ಸಾಲಿನ ಚೊಚ್ಚಲ 'ವೈಕಂ' ಪ್ರಶಸ್ತಿಯನ್ನು ಸಾಹಿತಿ ದೇವನೂರ ಮಹಾದೇವ ಅವರಿಗೆ ಕೇರಳದ ವೈಕಂನಲ್ಲಿ ಗುರುವಾರ ಪ್ರದಾನ ಮಾಡಲಾಯಿತು.
ಪೆರಿಯಾರ್ ನೇತೃತ್ವದ ವೈಕಂ ಹೋರಾಟದ ಶತಮಾನೋತ್ಸವ ಸಮಾರೋಪ ಸಮಾರಂಭ ಹಾಗೂ ಪೆರಿಯಾರ್ ಸ್ಮಾರಕ ಉದ್ಘಾಟನೆ ಕಾರ್ಯಕ್ರಮದಲ್ಲಿ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಮತ್ತು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.
ಕಾರ್ಯಕ್ರಮಕ್ಕೂ ಮುನ್ನ ಮುಖ್ಯಮಂತ್ರಿಗಳಿಬ್ಬರೂ ಪೆರಿಯಾರ್ ಅವರ ಪ್ರತಿಮೆಗೆ ಪುಷ್ಪಾರ್ಚನೆ ಮಾಡಿದರು. ನಂತರ ಪೆರಿಯಾರ್ ಅವರ ಜೀವನ, ಚಳವಳಿ-ಹೋರಾಟದ ಚಿತ್ರಗಳಿರುವ ಚಿತ್ರಸಂಗ್ರಹಾಲಯ ಹಾಗೂ ಗ್ರಂಥಾಲಯವನ್ನು ಉದ್ಘಾಟಿಸಿದರು.
ಪಿಣರಾಯಿ ವಿಜಯನ್ ಅವರು ಮಾತನಾಡಿ, 'ಇಂದಿನ ಜನಸಮುದಾಯಕ್ಕೆ ಅರಿವು, ವಿದ್ಯಾಭ್ಯಾಸ, ಲೋಕಜ್ಞಾನ, ಸ್ವಾಭಿಮಾನ ಅತ್ಯಗತ್ಯ ಎಂಬುದನ್ನು ಪೆರಿಯಾರ್ ಅವರು ಅಂದೇ ತಿಳಿಸಿದ್ದರು. ಪೆರಿಯಾರ್ ಅವರ ಪತ್ನಿ ನಾಗಮ್ಮ ಅವರ ಸಮುದಾಯ ಸೇವೆಯೂ ಸ್ಮರಣೀಯ' ಎಂದರು.
ಸ್ಟಾಲಿನ್ ಅವರು, ವೈಕಂ ಸ್ಥಳ ಹಾಗೂ ಇಲ್ಲಿನ ಸತ್ಯಾಗ್ರಹದ ಮಹತ್ವ ತಿಳಿಸಿದರು. 'ತಳಸಮುದಾಯದ ಧ್ವನಿಯಾಗಿ ನಿಂತ ದೇವನೂರ ಮಹಾದೇವ ಅವರಿಗೆ 'ವೈಕಂ ಸತ್ಯಾಗ್ರಹ'ದ ಶತಮಾನೋತ್ಸವ ಸ್ಮರಣಾರ್ಥ ಮೊದಲ ಪ್ರಶಸ್ತಿ ನೀಡುತ್ತಿರುವುದು ಸಂತಸ ತಂದಿದೆ' ಎಂದು ಹೇಳಿದರು.
ಇಬ್ಬರೂ ಮುಖ್ಯಮಂತ್ರಿಗಳು ಸಾಮಾಜಿಕ ನ್ಯಾಯದ ಪರವಾಗಿ ಮತ್ತು ಬ್ರಾಹ್ಮಣಶಾಹಿಯ ವಿರುದ್ಧವಾಗಿ ಮಾತನಾಡಿದರು.
ದೇವನೂರ ಮಹಾದೇವ ಅವರು ಸ್ಟಾಲಿನ್ ಅವರಿಗೆ ತಮಿಳು ಮತ್ತು ಕನ್ನಡದ ಪುಸ್ತಕಗಳನ್ನು ಹಾಗೂ ಪಿಣರಾಯಿ ವಿಜಯನ್ ಅವರಿಗೆ ಮಲಯಾಳ, ಕನ್ನಡ ಪುಸ್ತಕಗಳನ್ನು ನೀಡಿದರು. ದ್ರಾವಿಡ ಕಳಗಂನ ಅಧ್ಯಕ್ಷ ಕೆ.ವೀರಾಸಾಮಿಯವರಿಗೆ 'ಆರ್‌ಎಸ್‌ಎಸ್ ಆಳ-ಅಗಲ' ಪುಸ್ತಕಗಳನ್ನು ನೀಡಿದರು.