ವಾಷಿಂಗ್ಟನ್: ಮಾನವ ಸಹಿತ ಬಾಹ್ಯಾಕಾಶಯಾನ, ಬಾಹ್ಯಾಕಾಶ ಜಂಟಿ ಪರಿಶೋಧನೆ ಮತ್ತು ಬೆಳೆಯುತ್ತಿರುವ ಬಾಹ್ಯಾಕಾಶ ಆರ್ಥಿಕತೆಯಲ್ಲಿ ಸಹಭಾಗಿತ್ವದ ಕುರಿತು ಭಾರತ ಮತ್ತು ಅಮೆರಿಕದ ಅಧಿಕಾರಿಗಳು ಮಾತುಕತೆ ನಡೆಸಿದ್ದಾರೆ ಎಂದು ಶ್ವೇತಭವನವು ಹೇಳಿದೆ.
ಉಭಯ ದೇಶಗಳ ಬಾಹ್ಯಾಕಾಶ ಕಂಪನಿಗಳ ನಡುವೆ ವಾಣಿಜ್ಯ ಪಾಲುದಾರಿಕೆಯನ್ನು ಸುಗಮಗೊಳಿಸುವುದು ಸೇರಿದಂತೆ ಬಾಹ್ಯಾಕಾಶ ಯೋಜನೆಗಳ ಸಹಭಾಗಿತ್ವದ ಮುಂದಿನ ಅವಕಾಶಗಳ ಬಗ್ಗೆಯೂ ಮಾತುಕತೆಯಾಗಿದೆ ಎಂದು ಅದು ಬುಧವಾರ ತಿಳಿಸಿದೆ.
ಹ್ಯೂಸ್ಟನ್‌ನಲ್ಲಿ ಈ ಸಂಬಂಧ ಡಿ.17 ರಂದು ನಡೆದ ಸಭೆಯಲ್ಲಿ ಅಮೆರಿಕದ ಪ್ರಧಾನ ಉಪ ರಾಷ್ಟ್ರೀಯ ಭದ್ರತಾ ಸಲಹೆಗಾರ ಜಾನ್ ಫೈನರ್, ವಿದೇಶಾಂಗ ಕಾರ್ಯದರ್ಶಿ ಕರ್ಟ್ ಕ್ಯಾಂಪ್‌ಬೆಲ್ ಮತ್ತು ಭಾರತೀಯ ರಾಯಭಾರಿ ವಿನಯ್ ಕ್ವಾತ್ರಾ ಭಾಗಿಯಾಗಿದ್ದರು.
ನಾಸಾ, ಇಸ್ರೊ (ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ) ಪ್ರತಿನಿಧಿಗಳು ಹಾಗೂ ಬಾಹ್ಯಾಕಾಶ ಉದ್ಯಮದ ಪ್ರಮುಖರು ಈ ಸಭೆಯಲ್ಲಿ ಪಾಲ್ಗೊಂಡು, ಬಾಹ್ಯಾಕಾಶ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಎರಡು ದೇಶಗಳ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸಲು ಹೊಸ ಅವಕಾಶಗಳನ್ನು ಕಂಡುಕೊಳ್ಳಲು ಚರ್ಚೆ ನಡೆಸಲಾಯಿತು ಎಂದು ಅದು ಬುಧವಾರ ತಿಳಿಸಿದೆ.
'ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು 2023ರ ಜೂನ್‌ನಲ್ಲಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಗಡಿಗಳನ್ನು ಮೀರಿ ನಿಲ್ಲಲು, ಒಟ್ಟಾಗಿ ಕೆಲಸ ಮಾಡಲು ಒಪ್ಪಿಗೆ ನೀಡಿದ್ದರು. ಅಲ್ಲದೆ, 'ಆರ್ಟೆಮಿಸ್' ಒಪ್ಪಂದಗಳಿಗೆ ಭಾರತ ಸಹಿ ಹಾಕಿರುವುದು, ನಾಗರಿಕ, ಭದ್ರತೆ ಮತ್ತು ವಾಣಿಜ್ಯ ಬಾಹ್ಯಾಕಾಶ ಕ್ಷೇತ್ರಗಳಾದ್ಯಂತ ಉಭಯ ರಾಷ್ಟ್ರಗಳ ಸಹಯೋಗವು ಪರಿಣಾಮಕಾರಿ ಹಂತ ತಲುಪಿದೆ' ಎಂದು ಅದು ಹೇಳಿದೆ.
ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತೀಯ ಗಗನ ಯಾತ್ರಿಗಳನ್ನು ಕಳುಹಿಸುವ ಅಮೆರಿಕ ಮತ್ತು ಭಾರತದ ಮೊದಲ ಜಂಟಿ ಯೋಜನೆ, ನಾಸಾದ ಜಾನ್ಸನ್ ಬಾಹ್ಯಾಕಾಶ ಕೇಂದ್ರದಲ್ಲಿ ಇಸ್ರೊದ ಇಬ್ಬರು ಗಗನಯಾತ್ರಿಗಳಿಗೆ ತರಬೇತಿ ನೀಡುತ್ತಿರುವುದು, 2025ರಲ್ಲಿ ಉಡಾವಣೆಯಾಗಲಿರುವ 'ಆಕ್ಸಿಯಮ್-4 ಮಿಷನ್' ಬಗ್ಗೆಯೂ ಚರ್ಚೆ ಮಾಡಲಾಯಿತು.
ಉಪಗ್ರಹ ತಂತ್ರಜ್ಞಾನ ಮತ್ತು ಬಾಹ್ಯಾಕಾಶ ನೌಕೆಗಳ ಉಡಾವಣೆ ಹಾಗೂ ಬಾಹ್ಯಾಕಾಶ ಅನ್ವೇಷಣೆ ಮುಂದುವರಿಸುವತ್ತ ಗಮನಹರಿಸುವ ಅಮೆರಿಕ ಮತ್ತು ಭಾರತೀಯ ನವೋದ್ಯಮಗಳ ನಡುವಿನ ಪಾಲುದಾರಿಕೆ, ಉಭಯ ದೇಶಗಳ ಬಾಹ್ಯಾಕಾಶ ರಕ್ಷಣಾ ಸಹಕಾರವನ್ನು ಉತ್ತೇಜಿಸಲು ಸಭೆಯಲ್ಲಿ ಒಪ್ಪಿಗೆ ಸೂಚಿಸಲಾಯಿತು ಎಂದು ಅದು ಹೇಳಿಕೆಯಲ್ಲಿ ತಿಳಿಸಿದೆ.