ಉಪ್ಪಳ: ಮುಂದಿನ ವರ್ಷ ಉಡುಪಿಯ ಶ್ರೀಕೃಷ್ಣ ಪೂಜಾಪರ್ಯಾಯ ಪೀಠಾರೋಹಣಗೈಯಲಿರುವ ಶೀರೂರು ಮಠಾಧೀಶರಾದ ಪರಮಪೂಜ್ಯ ಶ್ರೀ ವೇದವರ್ದನ ತೀರ್ಥ ಶ್ರೀ ಪಾದಂಗಳವರು ಭಾನುವಾರ ತಮ್ಮ ಪಟ್ಟದ ದೇವರ ಸಹಿತರಾಗಿ ಕೊಂಡೆವೂರು ಮಠಕ್ಕೆ ಚಿತ್ತೈಸಿ ಮೊಕ್ಕಾಂ ಹೂಡಿದರು.
ಶ್ರೀ ನಿತ್ಯಾನಂದ ಯೋಗಾಶ್ರಮ ಕೊಂಡೆವೂರು ಮಠದ “ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿಗಳು ಭಕ್ತವೃಂದದೊಡನೆ ಯತಿವರ್ಯರನ್ನು ಪೂರ್ಣಕುಂಭದೊಡನೆ ಸ್ವಾಗತಿಸಿದರು. ಬಳಿಕ ಶ್ರೀ ಗಾಯತ್ರೀ ಮಂಟಪದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಪೂಜ್ಯ ಕೊಂಡೆವೂರು ಶ್ರೀಗಳು ಪೂಜ್ಯ ಶೀರೂರು ಶ್ರೀಗಳವರಿಗೆ ಗೌರವಾರ್ಪಣೆ ಸಲ್ಲಿಸಿದರು. ಬಳಿಕ ಶೀರೂರು ಶ್ರೀಗಳು ತಮ್ಮ ಆಶೀರ್ವಚನದೊಂದಿಗೆ ಪರ್ಯಾಯ ಮಹೋತ್ಸವಕ್ಕೆ ಸಮಸ್ತರನ್ನು ಆಮಂತ್ರಿಸಿದರು. ಕೊಂಡೆವೂರು ಶ್ರೀಗಳು ಆಶೀರ್ವಚನಗೈದರು. ಮಂಜುನಾಥ ಉಡುಪ ವೇದಿಕೆಯಲ್ಲಿ ಉಪಸ್ಥಿತರಿದ್ದು, ಯತಿದ್ವಯರ ಕುರಿತು ವಿವರಣೆ ನೀಡಿದರು.
ಮಂಜೇಶ್ವರ ತಾಲೂಕಿನ ಅನೇಕ ದೇವಾಲಯಗಳು, ಭಜನಾಮಂದಿರಗಳು, ಸಂಘಸಂಸ್ಥೆಗಳ ಪ್ರಮುಖರು ಶೀರೂರು ಶ್ರೀಗಳವರಿಗೆ ಗೌರವಾರ್ಪಣೆ ಸಲ್ಲಿಸಿದರು. ಕು ಗಾಯತ್ರಿ ಮತ್ತು ಕು.ಶ್ರಾವಣ್ಯ ಕೊಂಡೆವೂರು ಪ್ರಾರ್ಥನೆಗೈದರು. ನ್ಯಾಯವಾದಿ ಕೆ ಯಂ ಗಂಗಾಧರ ಕೊಂಡರವೂರು ಆಶ್ರಮದ ಸಂಕ್ಷಿಪ್ತ ಮಾಹಿತಿ ನೀಡಿ, ಸ್ವಾಗತಿಸಿ, ದಿನಕರ್ ಹೊಸಂಗಡಿ ನಿರೂಪಿಸಿದರು.
ಬಳಿಕ ಶ್ರೀಗಳವರು ತೊಟ್ಟಿಲು ಪೂಜಾಸೇವೆ ಮತ್ತು ಮಂಗಳವಾರ ಬೆಳಿಗ್ಗೆ ತಮ್ಮ ಪಟ್ಟದ ದೇವರ ಪೂಜೆಗಳನ್ನು ಕೊಂಡೆವೂರು ಮಠದ ಮೊಕ್ಕಾಂನಲ್ಲಿ ನೆರವೇರಿಸಿದರು.