ನವದೆಹಲಿ: ಈಶಾನ್ಯ ರಾಜ್ಯಗಳು ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲಿ ನಕ್ಸಲಿಸಂ ಅನ್ನು ಎದುರಿಸುವಲ್ಲಿ ಹಾಗೂ ಶಾಂತಿ ಮರು ಸ್ಥಾಪಿಸುವಲ್ಲಿ ಕೇಂದ್ರೀಯ ಮೀಸಲು ಪೊಲೀಸ್ ಪಡೆಯ (ಸಿಆರ್‌ಪಿಎಫ್) ಯೋಧರ ಕಾರ್ಯ ಶ್ಲಾಘನೀಯವಾದದ್ದು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಬುಧವಾರ ಹೇಳಿದ್ದಾರೆ.
ಸಿಆರ್‌ಪಿಎಫ್ ಪ್ರಧಾನ ಕಚೇರಿ ಅಮಿತ್ ಶಾ ಅವರು ಭೇಟಿ ನೀಡಿ, ವಿಶ್ವದ ಅತಿದೊಡ್ಡ ಅರೆಸೇನಾ ಪಡೆಯ ಕಾರ್ಯಾಚರಣೆಗಳು ಮತ್ತು ಆಡಳಿತಾತ್ಮಕ ದಕ್ಷತೆ ಕುರಿತು ಪರಿಶೀಲನೆ ನಡೆಸಿದ್ದಾರೆ.
ಇದೇ ಸಂದರ್ಭದಲ್ಲಿ ಸಿಆರ್‌ಪಿಎಫ್ ಮುಖ್ಯಸ್ಥರು ಶಾ ಅವರಿಗೆ ಸರ್ಕಾರದಿಂದ ಸಿಗುವ ವಿವಿಧ ಯೋಜನೆಗಳು ಸೇರಿದಂತೆ ಮೃತ ಯೋಧರ ಕುಟುಂಬಕ್ಕೆ ಸರ್ಕಾರ ಒದಗಿಸುವ ಯೋಜನೆಗಳ ಬಗ್ಗೆಯೂ ಮಾಹಿತಿ ನೀಡಿದ್ದಾರೆ.
ದೇಶದ ಆಂತರಿಕ ಭದ್ರತೆ ಮತ್ತು ಶಾಂತಿಯನ್ನು ಕಾಪಾಡುವ ನಿಟ್ಟಿನಲ್ಲಿ ಸಿಆರ್‌ಪಿಎಫ್ ಯೋಧರ ಪಾತ್ರ ಪ್ರಮುಖವಾದದ್ದು ಎಂದು ಶಾ ತಿಳಿಸಿದ್ದಾರೆ.
ಯೋಧರು ತಮ್ಮ ಆರೋಗ್ಯದ ಕಡೆ ಗಮನಹರಿಸಬೇಕೆಂದು ಸಲಹೆ ನೀಡಿದ ಶಾ, ರಾಗಿ ಬಳಕೆಗೆ ಒತ್ತು ನೀಡಿದ್ದಾರೆ. ಆರೋಗ್ಯದ ಸುರಕ್ಷತೆಯ ದೃಷ್ಟಿಯಿಂದ 'ಪ್ರಕೃತಿ ಪರೀಕ್ಷಾ ಅಭಿಯಾನ'ದಲ್ಲಿ ಭಾಗವಹಿಸಿ ಎಂದು ಕರೆ ನೀಡಿದ್ದಾರೆ.