ನವದೆಹಲಿ: ಭವಿಷ್ಯ ನಿಧಿಯ (ಪಿಎಫ್) ಕ್ಲೇಮನ್ನು ಎಟಿಎಂಗಳ ಮೂಲಕ ನೇರವಾಗಿ ನೌಕರರಿಗೆ ಸಿಗುವಂತೆ ನೌಕರರ ಭವಿಷ್ಯ ನಿಧಿ ಸಂಘಟನೆ (ಇಪಿಎಫ್‌ಒ) ಸೌಲಭ್ಯ ಕಲ್ಪಿಸಲಿದೆ ಎಂದು ಕೇಂದ್ರ ಕಾರ್ಮಿಕ ಸಚಿವಾಲಯ ಹೇಳಿದೆ.
ಈ ಕುರಿತು ಮಾಹಿತಿ ನೀಡಿರುವ ಸಚಿವಾಲಯದ ಕಾರ್ಯದರ್ಶಿ ಸುಮಿತ್ರಾ ದಾವ್ರಾ, 'ಮಾಹಿತಿ ತಂತ್ರಜ್ಞಾನ ವ್ಯವಸ್ಥೆಯ ಸುಧಾರಣೆಗೆ ಇಪಿಎಫ್‌ಒ ಒತ್ತು ನೀಡಿದ್ದು, ಇದರಿಂದ ಚಂದಾದಾರರಿಗೆ ತ್ವರಿತ ಹಾಗೂ ಸುಲಭವಾಗಿ ಸೌಲಭ್ಯ ಸಿಗಲಿದೆ.
2025ರ ಜನವರಿಯಿಂದ ಎಟಿಎಂ ಮೂಲಕ ಚಂದಾದಾರರು ಪಿಎಫ್ ಹಣ ಪಡೆಯುವ ಹೊಸ ಯೋಜನೆಯು ಜಾರಿಗೆ ಬರಲಿದೆ' ಎಂದಿದ್ದಾರೆ.
'ಸದ್ಯ ಇರುವ ವ್ಯವಸ್ಥೆಯಲ್ಲಿ ಹಣ ಹಿಂಪಡೆಯಲು ಇಪಿಎಫ್‌ಒಗೆ ಚಂದಾದಾರರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಈ ಪ್ರಕ್ರಿಯೆಯು ಪೂರ್ಣಗೊಳ್ಳಲು 7ರಿಂದ 10 ದಿನಗಳಾಗಲಿವೆ. ಆ ನಂತರ ಫಲಾನುಭವಿಯ ಬ್ಯಾಂಕ್ ಖಾತೆಗೆ ನೇರವಾಗಿ ಹಣ ಜಮೆಯಾಗುತ್ತದೆ. ಆದರೆ ಹೊಸ ವ್ಯವಸ್ಥೆಯಡಿ ಕ್ಲೇಮುಗೆ ಅನುಮೋದನೆ ದೊರೆತ ತಕ್ಷಣವೇ ಎಟಿಎಂ ಮೂಲಕ ಹಣ ಪಡೆಯಬಹುದಾಗಿದೆ. ಇದಕ್ಕಾಗಿ ಚಂದಾದಾರರಿಗೆ ಎಟಿಎಂ ಕಾರ್ಡ್ ವಿತರಿಸುವ ಸಾಧ್ಯತೆ ಇದೆ. ಇದರಿಂದ 7 ಕೋಟಿಗೂ ಹೆಚ್ಚು ಚಂದಾದಾರರಿಗೆ ಅನುಕೂಲವಾಗಲಿದೆ' ಎಂದಿದ್ದಾರೆ.
'ವೈದ್ಯಕೀಯ ವೆಚ್ಚ, ಗೃಹ ನಿರ್ಮಾಣ, ನಿವೇಶನ ಖರೀದಿ ಸೇರಿದಂತೆ ಹಲವು ಉದ್ದೇಶಗಳಿಗೆ ನೌಕರರ ಕ್ಲೇಮುಗಳ ತ್ವರಿತ ಇತ್ಯರ್ಥಕ್ಕೆ ಕ್ರಮ ಕೈಗೊಳ್ಳಲಾಗಿದೆ. ಮುಂದಿನ ದಿನಗಳಲ್ಲಿ ಇದು ಇನ್ನಷ್ಟು ಸರಳಗೊಳಿಸಲಾಗುವುದು. ಆ ಮೂಲಕ ಇಪಿಎಫ್‌ಒ ವ್ಯವಸ್ಥೆಯನ್ನು ಬ್ಯಾಂಕಿಂಗ್ ವ್ಯವಸ್ಥೆಯಂತೆಯೇ ಮೇಲ್ಜರ್ಜೆಗೆ ಏರಿಸುವ ಗುರಿ ಹೊಂದಲಾಗಿದೆ. ಅದರ ಜತೆಯಲ್ಲೇ ಚಂದಾದಾರರ ಹಕ್ಕುಗಳ ರಕ್ಷಣೆಗೂ ಆದ್ಯತೆ ನೀಡಲಾಗುವುದು' ಎಂದಿದ್ದಾರೆ.
'ಭವಿಷ್ಯ ನಿಧಿ ಹೊಂದಿರುವ ಉದ್ಯೋಗಿ ಮೃತಪಟ್ಟರೆ ಆತನ ಕುಟುಂಬಕ್ಕೆ ಆರ್ಥಿಕ ನೆರವು ಸಿಗಲಿದೆ. ಇದಕ್ಕಾಗಿ ಠೇವಣಿ ಆಧಾರಿತ ವಿಮಾ ಸೌಲಭ್ಯ ನೀಡಲಾಗುತ್ತಿದೆ. ಈ ಯೋಜನೆಯಡಿ ಖಾತೆದಾರರಿಗೆ ಗರಿಷ್ಠ ₹7 ಲಕ್ಷದವರೆಗೆ ಕವರೇಜ್ ಸಿಗಲಿದೆ. ಸಂತ್ರಸ್ತ ಕುಟುಂಬಕ್ಕೆ ಸಿಗುವ ಹಣವನ್ನೂ ಎಟಿಎಂ ಮೂಲಕ ಪಡೆಯಲು ಅವಕಾಶ ಕಲ್ಪಿಸಲಾಗುತ್ತಿದೆ' ಎಂದು ಮಾಹಿತಿ ನೀಡಿದ್ದಾರೆ.